ವಿಜಯವಾಣಿ ಸುದ್ದಿಜಾಲ ಉಡುಪಿ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಸಾರ್ವಜನಿಕವಾಗಿ ಮಾತನಾಡುವಾಗ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣಕುಮಾರ್ ಕೆ. ಹಾಗೂ ಉಡುಪಿ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಪುನೀತ್ ಅವರಿಗೆ ಕಾರ್ಯಕರ್ತರು ಗುರುವಾರ ದೂರು ನೀಡಿದರು.
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪ್ರತಿಭಟನೆ ಮಾಡುವ ನೆಪದಲ್ಲಿ ತನ್ನ ಬಳಿ ಶಸ್ತ್ರಾಸ್ತ್ರ ಇವೆಯೆಂದೂ, ಅದನ್ನು ಉಪಯೋಗಿಸಬೇಕಾಗುತ್ತದೆ. ಅಲ್ಲದೆ, ಯಾರಾದರೂ ಲೋಕಸಭೆಯ ಒಳಗೆ ಹೋಗಿ ರಾಹುಲ್ ಗಾಂಧಿಗೆ ಕಪಾಳಕ್ಕೆ ಹೊಡೆಯಬೇಕೆಂದು ಕರೆ ಕೊಟ್ಟಿದ್ದಾರೆ. ಇದು ಹಿಂಸೆ ಮಾಡುವಂತೆ ಸಾರ್ವಜನಿಕವಾಗಿ ನೀಡಿದ ಕರೆಯಾಗಿದೆ ಎಂದು ರಮೇಶ್ ಕಾಂಚನ್ ಆರೋಪಿಸಿದರು.
ಪ್ರತಿಪಕ್ಷ ನಾಯಕ ರಾಹುಲ್ ಅವರಿಗೆ ಸಂವಿಧಾನಬದ್ಧವಾಗಿ ವಿಶೇಷ ಭದ್ರತಾ ನಿಯಮಗಳಡಿ ರಕ್ಷಣೆಯಿದೆ. ಆದರೂ ಶಾಸಕ ಡಾ. ಭರತ್ ಶೆಟ್ಟಿ ಅವರು ರಾಷ್ಟ್ರೀಯ ಭದ್ರತಾ ನಿಯಮ ಉಲ್ಲಂಘಿಸಿ ರಾಹುಲ್ ಮೇಲೆ ಹಲ್ಲೆಗೆ ಪ್ರಚೋದನೆ ಮಾಡಿರುವುದು ಸೂಕ್ತವಲ್ಲ. ಇದಕ್ಕೆ ಬೆಂಬಲ ನೀಡಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ವಿರುದ್ಧವೂ ಕ್ರಿಮಿನಲ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದರು.
ಬ್ಲಾಕ್ ಕಾಂಗ್ರೆಸ್ನ ಪ್ರಮುಖರಾದ ಮೀನಾಕ್ಷಿ ಮಾಧವ ಬನ್ನಂಜೆ, ಜ್ಯೋತಿ ಹೆಬ್ಬಾರ್, ಗಣೇಶ್ ನೆರ್ಗಿ, ಸುರೇಶ್ ಶೆಟ್ಟಿ ಬನ್ನಂಜೆ, ಸುರೇಂದ್ರ ಆಚಾರ್ಯ, ಅನಂತ್ ನಾಯ್ಕ್, ಕೃಷ್ಣ ಹೆಬ್ಬಾರ್, ಶರತ್ ಶೆಟ್ಟಿ, ಸುಕನ್ಯಾ ಪೂಜಾರಿ, ಸತೀಶ್ ಕೊಡವೂರು, ಸತೀಶ್ ಕುಮಾರ್ ಮಂಚಿ, ಸಾಯಿರಾಜ್ ಕಿದಿಯೂರು ಸಂಜಯ್ ಆಚಾರ್ಯ ಇತರರಿದ್ದರು.