ವಿಜಯವಾಣಿ ಸುದ್ದಿಜಾಲ ಉಡುಪಿ
ಜ್ಞಾನ ಪ್ರಸಾರ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡುವುದು ಭಾರತೀಯ ಸನಾತನ ಪರಂಪರೆಯಲ್ಲಿ ಶ್ರೇಷ್ಠ ಸೇವೆಯಾಗಿದೆ. ಹೀಗಾಗಿ ನಮ್ಮ ಚಾತುರ್ಮಾಸ್ಯದ ದಿನಗಳಲ್ಲಿ ಶ್ರೀಕೃಷ್ಣ ನಗರಿಯ ಭಕ್ತರ ಮನೆಗಳಿಗೆ ಪ್ರತಿದಿನವೂ ತೆರಳಿ, ದೀಪ ಬೆಳಗಿ, ಭಾಗವತ ನೀರಾಂಜನ ಉತ್ಸವ ಎಂಬ
ಭಾಗವತ ಪ್ರವಚನದ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದಾಗಿ ಉಡುಪಿ ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀಪದಾರು ನುಡಿದರು.
ಉಡುಪಿಯ ರಥಬೀದಿಯಲ್ಲಿರುವ ಭಂಡಾರಕೇರಿ ಮಠದಲ್ಲಿ ಗುರುವಾರ ತಮ್ಮ 45ನೇ ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಂಡು ಆಶೀರ್ವಚನ ನೀಡಿ, ದಕ್ಷಿಣಾಯಣ ಪುಣ್ಯಕಾಲದಲ್ಲಿ ಭಗವಂತ ನಿದ್ರೆಗೆ ಜಾರುತ್ತಾನೆ. ಇಂತಹ ಸಂದರ್ಭಗಳಲ್ಲಿ ನಾವು ಮಾಡುವ ದಾನ, ಧರ್ಮ, ಭಾಗವತಾದಿ ಮಹಾನ್ ಗ್ರಂಥಗಳ ಶ್ರವಣದಿಂದ ಅನಂತ ಫಲ ಲಭಿಸುತ್ತದೆ ಎಂದರು.
ಭಗವಾನ್ ವೇದವ್ಯಾಸರ ಸಂಪ್ರೀತಿಗಾಗಿ ಚಾತುರ್ಮಾಸ್ಯ ವ್ರತ ಧಾರಣೆ ಮಾಡುವುದು, ಲೋಕದ ಹಿತಕ್ಕಾಗಿ ಒಂದೆಡೆ ಕುಳಿತು ಅನನ್ಯವಾಗಿ ಭಗವಂತನನ್ನು ಆರಾಧಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಧರ್ಮ, ದೇಶ ಮತ್ತು ಸನಾತನ ಸಂಸ್ಕೃತಿಯ ರಕ್ಷಣೆಗಾಗಿ ಚಾತುರ್ಮಾಸ್ಯ ಪರ್ಯಂತ ಏಕಶ್ಲೋಕಿ ಭಾಗವತ ನೀರಾಂಜನ ಉತ್ಸವ ಆಚರಿಸುತ್ತಿದ್ದೇವೆ. ಸಾತ್ವಿಕರು ಮತ್ತು ಭಕ್ತರು ಇನ್ನಷ್ಟು ಧರ್ಮ ಕಾರ್ಯದಲ್ಲಿ, ಸಂಸ್ಕೃತಿಯ ಪಾಲನೆ ಕೈಂಕರ್ಯದಲ್ಲಿ ತೊಡಗುವಂತೆ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದರು.
ಜಯತೀರ್ಥರ (ಟೀಕಾಚಾರ್ಯರ) ಆರಾಧನಾ ಮಹೋತ್ಸವ ನೆರವೇರಿಸಿದ ಭಂಡಾರಕೇರಿ ಶ್ರೀಗಳು, ಜ್ಞಾನ ಪ್ರಪಂಚಕ್ಕೆ ಜಯತೀರ್ಥರ ಕೊಡುಗೆ ಅಪಾರ. ಆಚಾರ್ಯ ಮಧ್ವರ ಸಮಗ್ರ ಶಾಸ್ತ್ರವನ್ನು ಸೂಕ್ತವಾಗಿ ಅನುವಾದ ಮಾಡಿ ಅದಕ್ಕೆ ತಕ್ಕನಾದ ಟೀಕೆ, ಟಿಪ್ಪಣಿ ಬರೆದು ಲೋಕಕ್ಕೆ ಸಮಗ್ರ ಮಾಧ್ವ ತತ್ವ ರಸಾಮೃತವನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಸ್ಮರಣೆಯೂ ಧನ್ಯತೆಯ ಸಂಕೇತವಾಗಿದೆ. ಮಧ್ವರ ಪರಮ ಕಾರುಣ್ಯದಿಂದಲೇ ಜೀವಿತದ ಬಹುಭಾಗವನ್ನು ಶಾಸ್ತ್ರ ಗ್ರಂಥಗಳ ಅಧ್ಯಯನ, ಅಧ್ಯಾಪನ ಮತ್ತು ಕೃತಿ ರಚನೆಗಾಗಿಯೇ ಮೀಸಲಿಟ್ಟಿದ್ದರು. ಲೋಕಕ್ಕೆ ಅವರ ಉಪಕಾರ, ಮಧ್ವ ಶಾಸ್ತ್ರಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದರು.
ಉಡುಪಿ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಅಭಿಮಾನ ಮತ್ತು ವಿಶ್ವಾಸದ ಆಮಂತ್ರಣ ಗೌರವಿಸಿ, ಉಡುಪಿಯಲ್ಲಿ 45ನೇ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದೇವೆ. ಭಕ್ತರು ಧರ್ಮಕಾರ್ಯಗಳಲ್ಲಿ ಹೆಚ್ಚು ಸಹಕಾರ ನೀಡುವ ಮೂಲಕ ಧನ್ಯತೆ ಸಮರ್ಪಿಸಬೇಕು. ವಿದ್ಯೇಶ ತೀರ್ಥ ಶ್ರೀಪಾದರು. ಭಂಡಾರಕೇರಿ ಮಠ, ಉಡುಪಿ