ಉಡುಪಿ: ಠೇವಣಿ ದಾರರಿಗೆ ಕೋಟ್ಯಾಂತರರು ವಂಚಿಸಿದ ಆರೋಪದಲ್ಲಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ಲಕ್ಷ್ಮೀನಾರಾಯಣನಿಗೆ ಜ.11 ರವರೆಗೆ (14 ದಿನ ) ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬುಧವಾರ ಮಧ್ಯಾಹ್ನ ಬ್ರಹ್ಮಾವರ ತಾಲೂಕಿನ ಮಟಪಾಡಿ ಬಳಿ ಉಡುಪಿ ಸೆನ್ ಠಾಣಾ ಪೋಲಿಸರು ಬಿ.ವಿ.ಲಕ್ಷ್ಮೀನಾರಾಯಣನನ್ನು ಬಂಧಿಸಿದ್ದು, ಆರೋಪಿಯ ಪರ ವಕೀಲ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಜ.2 ರಂದು ಇದರ ವಿಚಾರಣೆ ನಡೆಯಲಿದೆ.
ಗ್ರಾಹಕರ ಪ್ರತಿಭಟನೆ
ಠೇವಣಿದಾರರಿಗೆ ಬಡ್ಡಿ ಮತ್ತು ಅಸಲು ಹಣ ಪಾವತಿಸದೆ ಕೋಟ್ಯಾಂತರರು ವಂಚನೆ ಎಸಗಿರುವ ಬಗ್ಗೆ ಇತ್ತೀಚೆಗೆ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಮುಂಭಾಗ ನೂರಾರು ಮಂದಿ ಗ್ರಾಹಕರು ಪ್ರತಿಭಟನೆ ನಡೆಸಿದ್ದರು. ವಂಚನೆ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಸೆನ್ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಿಸಿದ್ದರು.
ಕರೋನಾ ಕಾಲದಲ್ಲಿ ಲಾಕ್ ಡೌನ್ ಆಗಿದ್ದು, ಈ ವೇಳೆ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದ ಸಮಸ್ಯೆಯಾಗಿದೆ. ಸೊಸೈಟಿಗೆ ಗ್ರಾಹಕರಿಂದ ಬರಬೇಕಾದ ಸಾಲದ ಹಣದ ಮೊತ್ತ ದೊಡ್ಡದಿದೆ. ಆ ಹಣ ವಸೂಲಿಯಾಗದ ಕಾರಣ ಈ ಸಮಸ್ಯೆಯಾಗಿದೆ. ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ಇತರ ಯಾವುದರಲ್ಲೂ ಹೂಡಿಕೆ ಮಾಡಿಲ್ಲ ಎಂದು ಆರೋಪಿ ಪರ ವಕೀಲ ಮಿತ್ರಕುಮಾರ್ ಶೆಟ್ಟಿ ಮಾಧ್ಯಮದವರಿಗೆ ತಿಳಿಸಿದ್ದಾರೆ.