ಪುತ್ತೂರು: ಚಿಕ್ಕಪುತ್ತೂರಿನಲ್ಲಿ ಭಾನುವಾರ ರಾತ್ರಿ ಏಳು ತಿಂಗಳ ಗರ್ಭಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಪುತ್ತೂರಿನ ನಿವಾಸಿ ಏಳು ತಿಂಗಳ ಗರ್ಭಿಣಿ ರೇಶ್ಮಾ(೨೮) ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸುರತ್ಕಲ್ ಮೂಲದ ರೇಶ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಂತನ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಚಿಕ್ಕಪುತ್ತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಪತಿ ಇಲ್ಲದ ಸಂದರ್ಭ ಭಯಗೊಂಡು ೧೧೨ಗೆ ಕರೆ ಮಾಡಿದ್ದರು. ಇದರಿಂದ ಚಿಂತನ್ ಅಸಮಾಧಾನಗೊಂಡು ಕೆಲದಿನಗಳಿಂದ ಮಾತು ಬಿಟ್ಟಿದ್ದರು ಎನ್ನಲಾಗಿದೆ. ಪತಿ ಹೊರಗಡೆ ಸುತ್ತಾಡಿಸಲು ಕರೆದುಕೊಂಡು ಹೋಗುವುದಿಲ್ಲ ಎಂಬ ಬಗ್ಗೆ ರೇಶ್ಮಾ ಅವರು ಸಹೋದರಿಯಲ್ಲಿ ಹೇಳಿಕೊಂಡಿದ್ದರು. ರೇಶ್ಮಾ ಅವರ ತಂದೆ- ತಾಯಿ ವಿದೇಶದಲ್ಲಿ ನೆಲೆಸಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆನ್ನಲಾಗಿದೆ. ಭಾನುವಾರ ರಾತ್ರಿ ಪತಿ ಬರುವಾಗ ತಡವಾಗಿದ್ದು, ಈ ವಿಚಾರದಲ್ಲಿ ಮನಸ್ತಾಪವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ ಮಹಜರು ಸಿದ್ಧಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.