ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್​ ಉಡುಪಿ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ಮಾತನಾಡಿದರು. ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೇಲಿಯೋ, ಉಪಾಧ್ಯೆಯರಾದ ಜ್ಯೋತಿ ಹೆಬ್ಬಾರ್​, ಚಂದ್ರಿಕಾ ಶೆಟ್ಟಿ, ಕಾರ್ಯದರ್ಶಿ ಅಮೃತಾ ಕೃಷ್ಣಮೂರ್ತಿ ಇದ್ದರು. 
ಜಿಲ್ಲೆ

ಪೆನ್ ಡ್ರೈವ್​ ಪ್ರಜ್ವಲ್​ನನ್ನು ಶಿಕ್ಷೆಗೊಳಪಡಿಸಿ

ಮಹಿಳಾ ಕಾಂಗ್ರೆಸ್​ನ ಉಡುಪಿ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ಸರ್ಕಾರಕ್ಕೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ
ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಜೆಡಿಎಸ್​ನ ಪ್ರಜ್ವಲ್​ ರೇವಣ್ಣನನ್ನು ಶಿಕ್ಷೆಗೆ ಒಳಪಡಿಸುವಂತೆ ಹಾಗೂ ಪೆನ್ ಡ್ರೈವ್​ ಪ್ರಕರಣ ಬಯಲಾದ ಬಳಿಕ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜರ್ಮನ್​ಗೆ ಪಲಾಯನಗೈದ ಆತನನ್ನು ಭಾರತಕ್ಕೆ ಕರೆತರುವಂತೆ ಮಹಿಳಾ ಕಾಂಗ್ರೆಸ್​ ಉಡುಪಿ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್​ನ ರಾಸಲೀಲೆ ಪ್ರಕರಣ ಜಗತ್ತಿನ ಮುಂದೆ ಭಾರತವೇ ತಲೆತಗ್ಗಿಸುವಂತಾಗಿದೆ ಎಂದರು.

ದೇಶದಲ್ಲಿ ಸಂವಿಧಾನ ಇದೆಯಾ?

ಜೆಡಿಎಸ್ ಸಂಸದನೂ ಆಗಿರುವ ಪ್ರಜ್ವಲ್​ ರೇವಣ್ಣ ತಾನು ಏನು ಮಾಡಿದರೂ ನಡೆಯುತ್ತದೆ, ತನ್ನನ್ನು ಯಾರೂ ಏನೂ ಮಾಡಲಾಗದು ಎಂಬ ಅಹಂಕಾರದಿಂದಲೇ ನೂರಾರು ಮಹಿಳೆಯರ ಶೀಲಹರಣ ಮಾಡಿದ್ದಾನೆ. ಮಹಿಳೆಯರ ಮೇಲೆ ಇಂತಹ ದೌರ್ಜನ್ಯ ಎಸಗಿದ್ದರೂ ಆತನನ್ನು ಬಂಧಿಸದೇ, ವಿದೇಶಕ್ಕೆ ಪಲಾಯನ ಮಾಡಲು ಬಿಟ್ಟಿರುವುದನ್ನು ಕಂಡಾಗ ನಮ್ಮ ದೇಶದಲ್ಲಿ ಸಂವಿಧಾನ ಇದೆಯಾ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಅವರ ಸಖ್ಯ ಬೇಕೇ?

ತಮ್ಮ ಮೈತ್ರಿ ಪಕ್ಷದವನು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಪ್ರಜ್ವಲ್​ಗೆ ವಿದೇಶಕ್ಕೆ ಹಾರಲು ಬೆಂಬಲ ನೀಡಿದರೇ ಎಂಬ ಗುಮಾನಿ ನಮ್ಮನ್ನು ಕಾಡುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಲೈಂಗಿಕ ಹಗರಣ ನಡೆಸಿದ್ದರೂ ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕರೂ ಪ್ರಜ್ವಲ್​ನ ಕುಕೃತ್ಯವನ್ನು ವಿರೋಧಿಸುತ್ತಿಲ್ಲ. ಪ್ರತಿಭಟಿಸುತ್ತಿಲ್ಲ. ಆತನಿಂದ ಅನ್ಯಾಕ್ಕೊಳಗಾದ ಸಾವಿರಾರು ಹೆಣ್ಣುಮಕ್ಕಳ ಬಗ್ಗೆ ಒಂದಿಷ್ಟೂ ಸಹಾನುಭೂತಿಯಿಲ್ಲವೇ? ದೇಶವನ್ನೇ ತಲ್ಲಣಗೊಳಿಸಿರುವ ಪ್ರಜ್ವಲ್​ ಪೆನ್ ಡ್ರೈವ್​ ಪ್ರಕರಣ ಬಿಜೆಪಿಯಂತಹ ದೊಡ್ಡ ಪಕ್ಷದ ಮೇಲೆ ಸಣ್ಣ ಪರಿಣಾಮವನ್ನೂ ಬೀರಿಲ್ಲವೇ ಎಂದು ಗೀತಾ ವಾಗ್ಳೆ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನ ಉಪಾಧ್ಯಕ್ಷೆಯರಾದ ಜ್ಯೋತಿ ಹೆಬ್ಬಾರ್​, ಚಂದ್ರಿಕಾ ಶೆಟ್ಟಿ, ಕಾರ್ಯದರ್ಶಿ ಅಮೃತಾ ಕೃಷ್ಣಮೂರ್ತಿ ಇದ್ದರು.

ಬಿಜೆಪಿಯ ಮಹಿಳಾ ಮೋರ್ಚಾ ಎಲ್ಲಿದೆ?

ಕೆಪಿಸಿಸಿ ಸದಸ್ಯೆ ವೆರೋನಿಕಾ ಕರ್ನೇಲಿಯೋ ಮಾತನಾಡಿ, ಪ್ರಜ್ವಲ್​ ರೇವಣ್ಣನ ಪೆನ್ ಡ್ರೈವ್​ ಪ್ರಕರಣ ದೇಶದಲ್ಲಷ್ಟೇ ಅಲ್ಲ, ಜಗತ್ತಿನಲ್ಲಿಯೇ ಮಹಿಳೆಯರ ಮೇಲೆ ನಡೆದ ಅತ್ಯಂತ ದೊಡ್ಡ ಕುಕೃತ್ಯ. ಬಿಜೆಪಿಯವರು ಕೆಲವೊಮ್ಮೆ ಮಹಿಳೆಯರ ವಿಚಾರವಾಗಿ ಅತ್ಯಂತ ಸಣ್ಣ ವಿಷಯ ಅಥವಾ ಘಟನೆಯನ್ನೂ ದೇಶ ಮಟ್ಟದಲ್ಲಿ ದೊಡ್ಡದು ಮಾಡುತ್ತಾರೆ. ಇದೀಗ ಅವರದ್ದೇ ಮೈತ್ರಿ ಪಕ್ಷ ಜೆಡಿಎಸ್​ನ ಪ್ರಜ್ವಲ್​ ರೇವಣ್ಣನ ಈ ದೊಡ್ಡ ಹಗರಣ ಕಣ್ಣಿಗೆ ಕಾಣಿಸುತ್ತಿಲ್ಲವೇ? ಸಾವಿರಾರು ಮಹಿಳೆಯರಿಗೆ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣನ ರಾಸಲೀಲೆ ಖಂಡಿಸಬೇಕೆಂದು ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯೆಯರಿಗೆ ಈಗ ತಿಳಿಯುತ್ತಿಲ್ಲವೇ ಎಂದು ಟೀಕಿಸಿದರು.