ಜಿಲ್ಲೆ

ಉದ್ಭವ ಮಹಾಗಣಪತಿ ದೇವಳದಲ್ಲಿ ಕಳ್ಳತನ, 11 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಲೂಟಿ

Udupi

ಸಿದ್ದಾಪುರ: ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ನುಕ್ಯಾಡಿ ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನಕ್ಕೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ದೇವಸ್ಥಾನದ ಮುಖ್ಯದ್ವಾರ, ಮುಂಭಾಗದ ಸುತ್ತಲೂ ಅಳವಡಿಸಿರುವ 500ರಿಂದ 600ಕ್ಕೂ ಹೆಚ್ಚಿನ ಕಂಚಿನ ಗಂಟೆಗಳು ಸೇರಿದಂತೆ ಭಕ್ತರೊಬ್ಬರು ನೀಡಿದ 106 ಕೆ.ಜಿ. ತೂಕ ಹೊಂದಿರುವ ದೊಡ್ಡ ಗಂಟೆಯೂ ಕಳವು ಮಾಡಲಾಗಿದೆ. ಕಳವಾದ ಗಂಟೆಗಳ ಒಟ್ಟು ಮೌಲ್ಯ 11ಲಕ್ಷ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಜತೆಗೆ ಕಾಣಿಕೆ ಹುಂಡಿ, ಸುಮಾರು 60ಕ್ಕೂ ಹೆಚ್ಚು ಆರತಿ ತಟ್ಟೆಗಳು, ಕಾಲು ದೀಪಗಳು ಹಾಗೂ ಇತರ ಸಾಮಗ್ರಿಗಳು ಕಳವಾಗಿವೆ.

ಸಮುದ್ರಮಟ್ಟದಿಂದ ಸುಮಾರು 800 ಅಡಿ ಎತ್ತರದಲ್ಲಿರುವ ಈ ದೇವಸ್ಥಾನಕ್ಕೆ ಕಳೆದ ವಾರ ಸಚಿವ ಈಶ್ವರಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದೇವಸ್ಥಾನ ಡೊಡ್ಡದಾದ ಗುಡ್ಡದ ಮೇಲೆ ನಿರ್ಜನ ಪ್ರದೇಶದಲ್ಲಿದ್ದು, ಸುತ್ತಮುತ್ತ 1.ಕಿ.ಮೀ. ದೂರದವರೆಗೆ ಯಾವುದೇ ಮನೆಗಳಿಲ್ಲ. ದೇವಳದ ಅರ್ಚಕ ವಿಘ್ನೇಶ ಅಡಿಗ ಶನಿವಾರ ಬೆಳಗ್ಗೆ ಪೂಜೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ವಿವಿಧ ತಂಡಗಳನ್ನು ರಚಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ನಾಯ್ಕ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.