ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ಐ ಎನ್ ಡಿ ಎ ವಿಪಕ್ಷಗಳ ಒಕ್ಕೂಟದ ಹಿಂದೂ ವಿರೋಧಿ ನಿಲುವು ಬಹಿರಂಗವಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬ್ರಿಟಿಷರು, ಮುಸ್ಲಿಂ ಮತಾಂಧ ರಾಜರು ಮತಾಂತರ, ದಬ್ಬಾಳಿಕೆಯ ಮೂಲಕ ಸನಾತನ ಧರ್ಮದ ನಿಮೂರ್ಲನೆಗೆ ವಿಫಲ ಪ್ರಯತ್ನಕ್ಕೆ ಮುಂದಾಗಿದ್ದರು, ಇದೀಗ ಉದಯ ನಿಧಿ ಅದೇ ಪರಂಪರೆಯನ್ನು ಮುಂದುವರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸನಾತನ ಧರ್ಮ ಕೇವಲ ಒಂದು ಧರ್ಮವಾಗಿರದೇ ಭಾರತದ ಜನರ ಜೀವನ ಪದ್ಧತಿಯಾಗಿದೆ. ಕೇವಲ ಅಲ್ಪ ಸಂಖ್ಯಾತ ಓಲೈಕೆ, ಕ್ರೈಸ್ತ ಮತಾಂತರ ಸಂಸ್ಥೆಗಳ ಹಿಡನ್ ಅಜೆಂಡಾದ ಟೂಲ್ ಕಿಟ್ ಭಾಗವಾಗಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಐ ಎನ್ ಡಿ ಎ ಒಕ್ಕೂಟದ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳು ದಿವ್ಯ ಮೌನ ತಾಳುವ ಮೂಲಕ ಪರೋಕ್ಷವಾಗಿ ಸಹಮತ ಸೂಚಿಸಿದೆ. ವಿಪಕ್ಷ ನಾಯಕರು ತಮ್ಮ ನಿಲುವನ್ನು ಕೂಡಲೇ ಸ್ಪಷ್ಟಪಡಿಸಬೇಕು. ತಮಿಳುನಾಡು ಸರ್ಕಾರ ಉದಯನಿಧಿಯನ್ನು ಕೂಡಲೇ ಮಂತ್ರಿ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.