ಮುದಗಲ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡದೆ ಅವಮಾನ ಮಾಡಿರುವ ಸ್ಥಳೀಯ ಕೆಲ ಶಾಲೆ, ಕಾಲೇಜುಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿನ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಿಲ್ಲ ಎಂದು ದಸಂಸ ಮುಖಂಡ ರಾಘವೇಂದ್ರ ಕುದುರಿ ಪ್ರತಿಭಟನೆಯಲ್ಲಿ ಒತ್ತಾಯಿಸಿದರು. ಸಂಬಂಧಪಟ್ಟ ಶಾಲೆ, ಕಾಲೇಜುಗಳವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಲಿಂಗಸುಗೂರು ತಹಸೀಲ್ದಾರ್ ಬಲರಾಮ ಕಟ್ಟಿಮನಿಗೆ ಮನವಿ ಸಲ್ಲಿಸಿದರು. ಬಿಇಒ ಹುಂಬಣ್ಣ ರಾಠೋಡ್, ಶಿಕ್ಷಣ ಇಲಾಖೆ ಅಧಿಕಾರಿ ಸುಜಾತ ಪಾಟೀಲ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ನಿರುಪಾದಿ ರೇವಣಕಿ, ಹನುಮಂತ ಬಡಿಗೇರ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ರಾಘವೆಂದ್ರ ಕುದುರಿ, ರವಿ ಕಟ್ಟಿಮನಿ, ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಎಸ್‌ಎ.ನಯೀಂ, ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ್, ಸತೀಶ ಭೋವಿ, ಮೋಹನ ಭಂಡಾರಿ, ಕೃಷ್ಣ ಚಲುವಾದಿ, ನ್ಯಾಮತ್ ಖಾದ್ರಿ, ಸುರೇಶ ಭಂಡಾರಿ ಇತರರಿದ್ದರು.