ಉಡುಪಿ: ಉದ್ಯಾವರ ಪಿತ್ರೋಡಿಯಲ್ಲಿ ಹೊಸ ಕೈಗಾರಿಕೆ ವಲಯಕ್ಕೆ ಎನ್‌ಒಸಿ ನೀಡಿರುವುದಕ್ಕೆ ಪಕ್ಷಾತೀತವಾಗಿ ವಿರೋಧಿಸಿದ ಗ್ರಾಮಸ್ಥರು, ಶುಕ್ರವಾರ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಮೇಲಧಿಕಾರಿಗಳು ಶೀಘ್ರವಾಗಿ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿಯವರೆಗೆ ಗ್ರಾಮ ಪಂಚಾಯಿತಿಯನ್ನು ತೆರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕೈಗಾರಿಕಾ ಉದ್ದಿಮೆದಾರರಿಗೆ ಪರವಾನಗಿ ನೀಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯರು ಪಂಚಾಯಿತಿ ಮುಂದೆ ಸೇರಿ ಪ್ರತಿಭಟನೆ ನಡೆಸಿದರು. ಗ್ರಾ.ಪಂ. ನೂತನ ಅಧ್ಯಕ್ಷ ರಾಧಕೃಷ್ಣ ಶ್ರಿಯಾನ್ ಅವರು ಸ್ಥಳೀಯರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿ, ಪಂಚಾಯಿತಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಾಮಾನ್ಯ ಜನರ ಉದ್ದಿಮೆಗಳಿಗೆ ಪರವಾನಗಿ ನೀಡಲು ತಿಂಗಳುಗಟ್ಟಳೆ ಕಾಯಿಸುವ ಅಧಿಕಾರಿಗಳು ಕೈಗಾರಿಕಾ ಉದ್ದಿಮೆಗೆ ಕೇವಲ ಅರ್ಧ ಗಂಟೆಯಲ್ಲಿ ಪರವಾನಗಿ ಕೊಟ್ಟಿದ್ದು ಹೇಗೆ ? ಎಂದು ಶ್ರೀಯಾನ್ ಪ್ರಶ್ನಿಸಿದರು.
ಅಧಿಕಾರಿ ಅಮಾನತುಗೊಳಿಸಿ: ಗ್ರಾಮಸ್ಥರ ಆಕ್ಷೇಪವಿರುವ ಯೋಜನೆಗೆ ಯಾವುದೇ ನಿರ್ಣಯ ಇಲ್ಲದೆ ಅವಕಾಶ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಹೈಕೋರ್ಟ್‌ನಲ್ಲಿರುವ ಕೇಸ್ ವಿತ್‌ಡ್ರಾ ಮಾಡಿ ತರಾತುರಿಯಲ್ಲಿ ಅರ್ಜಿಯನ್ನು ವಿಲೇವಾರಿ ನಡೆಸಿ ಅದೇ ದಿನ ಸಾಯಂಕಾಲ ಪರವಾನಗಿ ನೀಡಿದ್ದಾರೆ. ಕಾನೂನು ಬಾಹೀರವಾಗಿ ನೀಡಿದ ಪರವಾನಗಿ ರದ್ದುಗೊಳಿಸಬೇಕು. ಈ ಉದ್ದಿಮೆಗೆ ಅವಕಾಶ ನೀಡಿದ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಎಂದು ರಾಧಾಕೃಷ್ಣ ಶ್ರೀಯಾನ್ ಒತ್ತಾಯಿಸಿದರು.