ಬೆಂಗಳೂರು: ಉದಯಭಾನು ಕಲಾಸಂಘವು ವಜ್ರಮಹೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಪೂರಕ ಶಿಕ್ಷಣ, ವೃತ್ತಿ ಕೌಶಲ್ಯ, ಕಲಾ ಕೌಶಲ್ಯ, ಸಾಹಿತ್ಯ ತೇರು, ಕಲಾವೇದಿಕೆ ಸೇರಿ ವಿವಿಧ ಸಮಾಜ ಉಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿದೆ.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪೂರಕ ಶಿಕ್ಷಣವಾಗಿ ಉಚಿತ ಉಪನ್ಯಾಸ ತರಗತಿಗಳನ್ನು ಜುಲೈ ಅಂತ್ಯದಿಂದ ಆರಂಭಿಸಲಿದ್ದು, ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ.
ಯುವಜನರಿಗೆ ವೃತ್ತಿ ಕೌಶಲ್ಯಕ್ಕಾಗಿ ಕಂಪ್ಯೂಟರ್ ಬೇಸಿಕ್ ಮತ್ತು ಟ್ಯಾಲಿ ಅಕೌಂಟಿಂಗ್+ ಟಿಡಿಎಸ್+ ಜಿಎಸ್ಟಿ ತಲಾ ಎರಡು ತಿಂಗಳ ಅವಧಿಯ ತರಬೇತಿ ಹಾಗೂ ಮಹಿಳೆಯರಿಗೆ ಹೊಲಿಗೆ ಮತ್ತು ಕಸೂತಿ ತರಬೇತಿ ನೀಡಲಾಗುವುದು.
ವಿದ್ಯಾರ್ಥಿಗಳು, ಯುವಜನರು ಮತ್ತು ಮಹಿಳೆಯಲ್ಲಿ ಕಲಾಕೌಶಲ್ಯ ವೃದ್ಧಿಸಲು ಲಲಿತಕಲೆಗಳಲ್ಲಿ ಆಸಕ್ತಿ ಇರುವ 7 ವರ್ಷ ಮೇಲ್ಪಟ್ಟವರಿಗೆ ಚಿತ್ರಕಲೆ, ಸುಗಮ ಸಂಗೀತ ಭರತನಾಟ್ಯ ಮತ್ತು ಕೀಬೋರ್ಡ್ ತರಗತಿಗಳನ್ನು ನಡೆಸಲಾಗುವುದು. ಲೇಖಕರು, ಪ್ರಕಾಶಕರನ್ನು ಪ್ರೋತ್ಸಾಹಿಸಲು ಸಂಘದ ವೇದಿಕೆಯಲ್ಲಿ ಪ್ರತಿ ತಿಂಗಳು 3ನೇ ಶನಿವಾರ ನಾಲ್ಕು ಪುಸ್ತಕಗಳ ಬಿಡುಗಡೆಗೆ ಕಾರ್ಯಕ್ರಮ ನಡೆಸಲಾಗುವುದು.
ಉದಯೋನ್ಮುಖ ನೃತ್ಯ, ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸಲು ಪ್ರತಿ ತಿಂಗಳ ಮೂರನೆಯ ಶನಿವಾರ ಹಾಗೂ ಭಾನುವಾರದಂದು ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಆಸಕ್ತರು ವಿವರಗಳಿಗೆ ದೂ: 080-26609343 ಅಥವ ಮೊ: 91 98441 92952ಗೆ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸಂಘದ ಗೌರವ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ತಿಳಿಸಿದ್ದಾರೆ.