ನರಗುಂದ: ಪಟ್ಟಣದ ಎಫ್.ಆರ್. ಪಾಟೀಲ ಎಂಬುವರ ಮನೆಯಲ್ಲಿ ಬುಧವಾರ ಕಾಣಿಸಿಕೊಂಡ ಉಡವನ್ನು ಉರಗ ರಕ್ಷಕ ಬಿ.ಆರ್. ಸುರೇಬಾನ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಅಪರೂಪವಾಗುತ್ತಿರುವ ಜೀವ ವೈವಿಧ್ಯದ ಉಡವು ಆಹಾರ ಅರಸಿಕೊಂಡು ಮನೆಗೆ ಬಂದಿತ್ತು. ಅಂದಾಜು ಎರಡು ಅಡಿ ಉದ್ದ, 3ಕೆಜಿ ತೂಕ ಹೊಂದಿದ್ದ ಉಡ ಮನೆಗೊಳಗೆ ನುಗ್ಗಿರುವುದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡಿದ್ದರು. ಮನೆಯೊಳಗೆ ಮೊಸಳೆ ನುಗ್ಗಿದೆ ಎಂಬ ಆತಂಕದಿಂದ ಮಹಿಳೆಯರು ಕೂಗಾಡುತ್ತಿರುವುದನ್ನು ಕಂಡ ಪುರಸಭೆ ಸದಸ್ಯ ರಾಚನಗೌಡ ಪಾಟೀಲ ಅವರು, ಪುರಸಭೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸಂಗಮೇಶ ಬ್ಯಾಳಿ, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರೀತಿ ಗವಿಮಠ, ಮಹಾಂತೇಶ ಚಲವಾದಿ ಅವರು ಉರಗ ರಕ್ಷಕ ಸುರೇಬಾನ ಅವರನ್ನು ಸಂಪರ್ಕಿಸಿದ್ದರು.
ಉಡದ ಎಣ್ಣೆ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಚರ್ಮವು ಬಳಕೆಗೆ ಬರುತ್ತದೆ. ಬಹುತೇಕ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಉಡಗಳು ಕಪ್ಪೆ, ಹಾವು, ಹಾವಿನ ಮೊಟ್ಟೆ, ಸಣ್ಣಪುಟ್ಟ ಪಕ್ಷಿ ಹಾಗೂ ಅವುಗಳ ಮೊಟ್ಟೆ ತಿಂದು ಬದುಕುತ್ತವೆ ಎಂದು ಬಿ.ಆರ್. ಸುರೇಬಾನ ವಿಜಯವಾಣಿಗೆ ತಿಳಿಸಿದರು.