ಜಿಲ್ಲೆ

ಉಚ್ಚಿಲ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ವಿಘ್ನ

Udupi

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿಗಾಗಿ ಉಚ್ಚಿಲದಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಸ್ಥಾಪಿಸಿರುವ ಗೂಡಂಗಡಿಗಳನ್ನು ಶುಕ್ರವಾರ ತೆರವು ಮಾಡಲು ಮುಂದಾದ ಸಂದರ್ಭ ಗುತ್ತಿಗೆದಾರ ನವಯುಗ ಕಂಪನಿ ಸಿಬ್ಬಂದಿ ಹಾಗೂ ಅಂಗಡಿ ಮಾಲೀಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಉಚ್ಚಿಲ ಪೇಟೆಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿದ್ದರೂ, ಸರ್ವೀಸ್ ರಸ್ತೆ ನಿರ್ಮಾಣ ಈವರೆಗೂ ನಡೆದಿಲ್ಲ. ಸದ್ಯ ಗುತ್ತಿಗೆದಾರರು ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನಗೊಳಿಸಿರುವ ಜಾಗದಲ್ಲಿರುವ ಗೂಡಂಗಡಿಗಳ ತೆರವಿಗೆ ಸೂಚನೆ ನೀಡಿದ್ದಾರೆ. ಆದರೆ ಗೂಡಂಗಡಿಗಳನ್ನು ತೆರವು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನವಯುಗ ಕಂಪನಿ ಪ್ರಬಂಧಕ ಸಹಿತ ಸಿಬ್ಬಂದಿ ಗೂಡಂಗಡಿ ತೆರವಿಗೆ ಮುಂದಾದರು. ಈ ವೇಳೆ ಗೂಡಂಗಡಿಯವರು ಪ್ರತಿರೋಧ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಯಿತು. ಕೆಲ ಮಂದಿ ಶಾಸಕರ ಪ್ರಭಾವ ಬಳಸಿ ತೆರವು ಮಾಡದಂತೆ ತಾಕೀತು ಮಾಡಿದರು. ಪರಿಣಾಮ ಸಿಬ್ಬಂದಿ ತೆರವು ಮಾಡಲಾಗದೆ ಬರಿಗೈಯಲ್ಲಿ ವಾಪಸಾದರು.

ಉಚ್ಚಿಲದಲ್ಲಿ ಈಗಾಗಲೇ ಸ್ವಾಧೀನಗೊಂಡಿರುವ ಜಮೀನಿನಲ್ಲಿರುವ ಕಟ್ಟಡಗಳನ್ನು ಶೀಘ್ರ ತೆರವು ಮಾಡಬೇಕಿದೆ. ಗೂಡಂಗಡಿ ತೆರವು ಮಾಡಿ ಸರ್ವೀಸ್ ರಸ್ತೆ ಕಾಮಗಾರಿ ನಡೆಸುವಂತೆ ಸಾಕಷ್ಟು ದೂರು ಬರುತ್ತಿವೆ. ತೆರವು ಮಾಡಿಕೊಡುವಂತೆ ಉಪವಿಭಾಗಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಲಾಗುವುದು ಎಂದು ನವಯುಗ ಕಂಪನಿ ಪ್ರಬಂಧಕ ಶಿವಪ್ರಸಾದ್ ರೈ ತಿಳಿಸಿದರು.

ಅಪೂರ್ಣ ರಸ್ತೆಯಿಂದ ಹೆಚ್ಚಿದ ಗೂಡಂಗಡಿ ಭೂಸ್ವಾಧೀನಗೊಂಡು ವರ್ಷಗಳೇ ಕಳೆದರೂ ಉಚ್ಚಿಲ ಪೇಟೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೂ ಸರ್ವೀಸ್ ರಸ್ತೆ ನಿರ್ಮಾಣ ಅಪೂರ್ಣವಾಗಿದೆ. ಪರಿಣಾಮ ಪೇಟೆ ಇಕ್ಕೆಲಗಳಲ್ಲಿ ಸಾಕಷ್ಟು ಬೀದಿ ವ್ಯಾಪಾರಿ ಅಂಗಡಿಗಳು ಕಾರ್ಯಾರಂಭಿಸಿವೆ. ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರಲ್ಲಿ ಎರಡೂ ಕಡೆಯವರು ರಾಜಕೀಯ ಪ್ರಭಾವ ಬಳಸುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಕಗ್ಗಂಟಾಗಿದೆ. ಜನಪ್ರತಿನಿಧಿಗಳು ಹಾಗೂ ಇಲಾಖೆ ಈ ಬಗ್ಗೆ ಎಚ್ಚೆತ್ತು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿ ಗೂಡಂಗಡಿಗಳವರಿಗೆ ಮನವರಿಕೆ ಮಾಡಿ ತೆರವು ಮಾಡಲು ಸೂಚಿಸಲಾಗುವುದು. ಕೇವಲ ಒಂದು ಗೂಡಂಗಡಿ ತೆರವು ಮಾಡುತ್ತಾರೆ ಎಂಬ ತಪ್ಪು ಅಭಿಪ್ರಾಯ ಕೆಲವರಲ್ಲಿದೆ. ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕಿರುವುದರಿಂದ ಭೂ ಸ್ವಾಧೀನಗೊಂಡಿರುವ ಜಮೀನಿನಲ್ಲಿರುವ ಎಲ್ಲ್ಲ ಗೂಡಂಗಡಿಗಳನ್ನು ತೆರವು ಮಾಡುವುದು ಅನಿವಾರ್ಯ. - ದಿಲೀಪ್, ಪಡುಬಿದ್ರಿ ಠಾಣಾಧಿಕಾರಿ