ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿಸಭಾಂಗಣದಲ್ಲಿ ಗುರುವಾರ ಉಚ್ಚಿಲ-ಬಡಾ ಗ್ರಾಪಂನ 2020-21ನೇ ಸಾಲಿನ ಪ್ರಥಮ ಗ್ರಾಮಸಭೆ ಆಯೋಜಿಸಿದ್ದು, ಕೋರಂ ಕೊರತೆ ಹಾಗೂ ಅಧಿಕಾರಿಗಳ ಗೈರಿನಿಂದ ಅಸಮಾಧಾನಗೊಂಡ ಕೆಲ ಗ್ರಾಮಸ್ಥರು ಗ್ರಾಮಸಭೆಯನ್ನು ರದ್ದು ಮಾಡುವಂತೆ ಒತ್ತಾಯಿ, ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬಡಾ ಗ್ರಾಪಂ ಆಡಳಿತಾಧಿಕಾರಿ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ. ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಗ್ರಾಮಸಭೆಯಲ್ಲಿ ಲೆಕ್ಕಪರಿಶೋಧಕಿ ನಿರ್ಮಲಾ ಶೆಟ್ಟಿ ಲೆಕ್ಕಪತ್ರ ಮಂಡಿಸಿ ಅನುಮೋದನೆಗಾಗಿ ಕೇಳಿದಾಗ ಗ್ರಾಮಸ್ಥರಾದ ಸಂತೋಷ್, ಎನ್.ಡಿ.ಬಂಗೇರ ಸಹಿತ ಹಲವರು ಗ್ರಾಮಸಭೆಯಲ್ಲಿ ಕೋರಂ ಕೊರತೆ ಬಗ್ಗೆ ಪ್ರಸ್ತಾವಿಸಿ ಸಭೆ ರದ್ದುಪಡಿಸುವಂತೆ ಆಗ್ರಹಿಸಿದರು.
ಗ್ರಾಮಸಭೆಯಲ್ಲಿ ಉಪಸ್ಥಿತರಿರಬೇಕಾದ 22 ಇಲಾಖಾ ಅಧಿಕಾರಿಗಳ ಪೈಕಿ 6 ಮಂದಿ ಮಾತ್ರವಿದ್ದ ಕಾರಣ ಸಭೆಯ ಮುಂದೂಡುವಿಕೆಗೆ ಒತ್ತಡ ಕೇಳಿ ಬಂತು. ಅಲ್ಲದೆ ಬುಧವಾರ ಸಂಜೆವರೆಗೂ ಗ್ರಾಮಸ್ಥರಿಗೆ ಗ್ರಾಮಸಭೆಯ ಮಾಹಿತಿ ನೀಡದಿರುವ ಬಗ್ಗೆಯೂ ಗಮನ ಸೆಳೆಯಲಾಯಿತು. ಈ ಎಲ್ಲಾ ಕಾರಣಗಳಿಂದ ಗ್ರಾಮಸಭೆಯನ್ನು ರದ್ದುಗೊಳಿಸುವಂತೆ ಕೆಲವರು ಆಗ್ರಹಿಸಿದರು. ಆದರೆ ಹೆಚ್ಚು ಮಂದಿ ಗ್ರಾಮಸಭೆ ಮುಂದುವರಿಸುವಂತೆ ಒತ್ತಡ ಹೇರಿದರು. ಈ ವೇಳೆ ಗ್ರಾಮಸಭೆಯ ಮುಂದುವರಿಕೆಗೆ ಹೆಚ್ಚು ಮಂದಿ ಕೈ ಎತ್ತಿದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದುವರಿಸಲಾಯಿತು. ಸಭೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದವರು ಸಭಾತ್ಯಾಗ ಮಾಡಿದರು.
ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ಗ್ರಾಮಸ್ಥರ ವಿಶೇಷ ಸಭೆ ಕರೆದು ಎಲ್ಲರ ಒಪ್ಪಿಗೆ ಪಡೆದ ಬಳಿಕವೇ ಉಚ್ಚಿಲ ಬಡಾ ಪಂಚಾಯಿತಿಯನ್ನು ಕಾಪು ಪುರಸಭೆ ಸೇರ್ಪಡೆಗೆ ಮುಂದಡಿಯಿಡಲಾಗುವುದು. ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ಪ್ರಾಧಿಕಾರದ ರದ್ದತಿ ಅಥವಾ ಪುರಸಭೆಗೆ ಸೇರ್ಪಡೆ ನಿರ್ಣಯಕ್ಕೆ ಗ್ರಾಪಂ ಬದ್ಧವಿದೆ ಎಂದು ಪಿಡಿಒ ಕುಶಾಲಿನಿ ತಿಳಿಸಿದರು.
ಮುಂದಿನ ಗ್ರಾಮಸಭೆಯ ಸಂದರ್ಭ 10 ದಿನ ಮುಂಚಿತವಾಗಿ ಎಲ್ಲರಿಗೂ ಮಾಹಿತಿ ನೀಡುವ ಬಗ್ಗೆ ಪಿಡಿಒ ಭರವಸೆ ನೀಡಿದರು.
ಜಿಪಂ ಸದಸ್ಯೆ ಶಿಲ್ಪಾ ಸುವರ್ಣ, ಕಾಪು ತಾಪಂ ಉಪಾಧ್ಯಕ್ಷ ಯು.ಸಿ.ಶೇಖಬ್ಬ, ತೋಟಗಾರಿಕೆ ಇಲಾಖೆ ದೀಪಾ, ಮಕ್ಕಳ ಮತ್ತು ಕಲ್ಯಾಣ ಇಲಾಖೆಯ ದೀಪಾ, ಆರೋಗ್ಯ ಕೇಂದ್ರದ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
ಅಂಗನವಾಡಿ ಕಟ್ಟಡಕ್ಕೆ ಬೇಡಿಕೆ
ಗ್ರಾಮ ವ್ಯಾಪ್ತಿಯ ಭಾಸ್ಕರನಗರ ಬಳಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 3ವರ್ಷದಿಂದ ಪ್ರಯತ್ನಿಸುತ್ತಿದ್ದರೂ ಇಲಾಖೆ ಮುತುವರ್ಜಿ ವಹಿಸದಿರುವ ಬಗ್ಗೆ ಗ್ರಾಪಂ ಸದಸ್ಯ ರಫೀಕ್ ಇಲಾಖೆಯ ಗಮನ ಸೆಳೆದರು. ಈ ಬಗ್ಗೆ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಫಿಲೋಮಿನಾ ತಕ್ಷಣ ಕ್ರಮ ಜರುಗಿಸುವ ಭರವಸೆ ನೀಡಿದರು. ಪಡುಬಿದ್ರಿ ಠಾಣಾ ಎಚ್‌ಸಿ ಪ್ರಕಾಶ್, ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಸರ ಕಳ್ಳತನ, ಮನೆ ಕಳ್ಳತನ, ವಾಹನ ಕಳ್ಳತನಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮಸ್ಥರು ಹೆಚ್ಚು ಜಾಗೃತೆ ವಹಿಸುವಂತೆ ಹಾಗೂ ಅನುಮಾನವಿದ್ದವರ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಗ್ರಾಮಸ್ಥರನ್ನು ವಿನಂತಿಸಿದರು.