ಅಫಜಲಪುರ ತಾಲೂಕು ಮಣ್ಣೂರು ಬಳಿಯ ಭೀಮಾ ನದಿಯಲ್ಲಿರುವ ಯಲ್ಲಮ್ಮದೇವಿ ದರ್ಶನಕ್ಕೆ ಹೋಗುವ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ
- ಅಫಜಲಪುರ, ಜೇವರ್ಗಿ ಮತ್ತು ಕಲಬುರಗಿ ತಾಲೂಕಿನ ಭೀಮಾ ತೀರದಲ್ಲಿ Alrt
ಕಲಬುರಗಿ : ಮಹಾ ಸರ್ಕಾರ ಉಜನಿ ಮತ್ತು ವೀರಭಟ್ಕಳ್ ಜಲಾಶಯದಿಂದ ಹೆಚ್ಚುವರಿ ನೀರು ಭೀಮಾ ನದಿಗೆ ಹರಿಸುತ್ತಿರುವುದರಿಂದಾಗಿ ಅಫಜಲಪುರ, ಜೇವರ್ಗಿ ತಾಲೂಕಿನ ನೂರಾರು ಹಳ್ಳಿಗಳ ಜನ ಆತಂಕಕ್ಕೆ ಸಿಲುಕಿದ್ದಾರೆ. ಈ ಭಾಗದ ಬಹುತೇಕ ಸೇತುವೆಗಳು ಜಲಾವೃತವಾಗಿವೆ. ನೀರು ಬಿಡುಗಡೆ ಪ್ರಮಾಣ ಹೆಚ್ಚಳ ಮಾಡಿದಲ್ಲಿ ಮಹಾ ನೀರು ಹಳ್ಳಿಗಳಿಗೆ ಹೊಕ್ಕಲಿದೆ. ಹೀಗಾಗಿ ಹಳ್ಳಿ ಮಂದಿಗೆ ನಿದ್ದೆಗೆಡಿಸಿದೆ.
ಮಹಾರಾಷ್ಟçದಿಂದ ಇಂಡಿಯ ಚಡಚಣ ಮಾರ್ಗವಾಗಿ ಜಿಲ್ಲೆಯ ಮಣ್ಣೂರು ಗ್ರಾಮದ ಮೂಲಕ ಭೀಮಾ ನದಿಗೆ ಸೇರ್ಪಡೆಯಾಗುತಿದೆ. ಅಫಜಲಪುರ ತಾಲೂಕು ಮಣ್ಣೂರು ಬಳಿಯ ಭೀಮಾ ನದಿಯಲ್ಲಿರುವ ಯಲ್ಲಮ್ಮದೇವಿ ದರ್ಶನಕ್ಕೆ ಹೋಗುವ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಪ್ರಸಕ್ತ ಭೀಮೆಗೆ ೧.೪೧ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ೧.೪೦ ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಕಲಬುರಗಿ ಜಿಲ್ಲೆಯ ಭೀಮಾ ತೀರದ ಸುಮಾರು ೧೫೮ ಹಳ್ಳಿಗಳು ಪ್ರವಾಹಕ್ಕೆ ಸಿಲುಕಲಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಮಹಾರಾಷ್ಟçದಿಂದ ಬರುವ ನೀರಿನ ಪ್ರಮಾಣ ನಿತ್ಯ ಮಾನಿಟರ್ ಮಾಡಲಾಗುತ್ತಿದೆ. ಪ್ರಸಕ್ತ ೧.೪೧ ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದೆ. ಈ ಪ್ರಮಾಣ ಇನ್ನೂ ಹೆಚ್ಚಳ ಮಾಡಿದಲ್ಲಿ ನೂರಾರು ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಲಿವೆ. ಹಾಗೊಂದು ವೇಳೆ ಪರಿಸ್ಥಿತಿ ಕೈಮೀರಿದರೆ ಹಳ್ಳಿಗಳ ಸ್ಥಳಾಂತರ, ಗಂಜಿ ಕೇಂದ್ರ ಪ್ರಾರಂಭ, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಅಫಜಲಪುರ, ಜೇವರ್ಗಿ ಮತ್ತು ಕಲಬುರಗಿ ತಾಲೂಕಿನ ಭೀಮಾ ತೀರದ ಗ್ರಾಮಗಳನ್ನು ಅನೇಕ ಅಧಿಕಾರಿಗಳಿಗೆ ಉಸ್ತುವಾರಿ ವಹಿಸಲಾಗಿದೆ.