ಉಳ್ಳಾಲ: ನಾನು ವಿಧಾನಸಭಾಧ್ಯಕ್ಷ ಆಗಿರಬಹುದು. ಆದರೆ ನನ್ನ ಕ್ಷೇತ್ರ ಮತ್ತು ಜಿಲ್ಲೆಯ ಜನರ ಸೇವಕನಾಗಿದ್ದು ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಖಾದರ್ ಸ್ಪೀಕರಾ ಅಥವಾ ಉಸ್ತುವಾರಿ ಸಚಿವರಾ? ಈವರೆಗೆ ಯಾವುದೇ ಸ್ಪೀಕರ್ ಆಡಳಿತಾತ್ಮಕ ವಿಚಾರದಲ್ಲಿ ಸಭೆ ನಡೆಸಿರಲಿಲ್ಲ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಕಾರಾತ್ಮಕ ಚಿಂತನೆ ಇರುವವರು ನಾನು ನಡೆಸಿರುವ ಸಭೆ, ಸುದ್ದಿಗೋಷ್ಠಿಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಇದನ್ನೇ ಮುಂದಿಟ್ಟು ನಕಾರಾತ್ಮಕವಾಗಿ ಮಾತನಾಡುವವರಿಗೆ ಏನೂ ಮಾಡಲಾಗದು. ಅದು ಅವರ ಪಕ್ವತೆಯನ್ನಷ್ಟೇ ತೋರಿಸುತ್ತದೆ ಎಂದರು.
ಹಿಂದುಳಿದ ವರ್ಗಗಳ ಆಯೋಗ ಸ್ವಾಯತ್ತ ಸಂಸ್ಥೆಯಾಗಿದೆಯೇ ಹೊರತು ಸರ್ಕಾರದ ಅಧೀನದಲ್ಲಿಲ್ಲ. ಇದೀಗ ಜಾತಿ ಗಣತಿಗೆ ಮುಂದಾಗಿದ್ದು ಸಹಕಾರ ನೀಡುವುದು ಸರ್ಕಾರದ ಜವಾಬ್ದಾರಿ. ಜನರಲ್ಲಿ ಗೊಂದಲ ಆಗುವ ಬದಲು ಮೊದಲೇ ಬಗೆಹರಿಸಬೇಕು ಎನ್ನುವ ನೆಲೆಯಲ್ಲಿ ಎಲ್ಲ ವರ್ಗದ ಜನರ ಜತೆ ಕುಳಿತು ಚರ್ಚಿಸಿ ಗೊಂದಲ ನಿವಾರಿಸುವ ಪ್ರಯತ್ನದ ಮಾಡಿದರೆ ಯಾರಿಗೇನು ತೊಂದರೆ? ಎಂದು ಪ್ರಶ್ನಿಸಿದರು.
ಈವರೆಗೆ ಕೆಂಪುಕಲ್ಲು ವ್ಯಾಪಾರಿಗಳು ಅಧಿಕಾರಿಗಳ ಭಯ ಮತ್ತು ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದರು. ಸ್ವಾಭಿಮಾನ ಮತ್ತು ಧೈರ್ಯದಿಂದ ವ್ಯಾಪಾರ ಮಾಡಬೇಕೆನ್ನುವ ನಿಟ್ಟಿನಲ್ಲಿ ಸೂಕ್ತ ನಿಯಮ ಜಾರಿಗೆ ತರಲಾಗಿದ್ದು, ಇದರಿಂದ ವ್ಯಾಪಾರಿಗಳಿಗೆ ಎಲ್ಲ ರೀತಿಯ ಪ್ರಯೋಜನ ಆಗಲಿದೆ. ಅಲ್ಲದೆ ಕೆಂಪುಕಲ್ಲು ಕಡಿಮೆ ದರದಲ್ಲಿ ಸಿಗುವ ವಿಶ್ವಾಸ ಇದೆ ಎಂದು ಯು.ಟಿ.ಖಾದರ್ ಅಭಿಪ್ರಾಯಪಟ್ಟರು.