ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ವಿದ್ಯಾರ್ಥಿಗಳು ಸ್ಪಷ್ಟ ಗುರಿ ಇಟ್ಟುಕೊಂಡು, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಶ್ರಮಿಸಿದರೆ ಭವಿಷ್ಯ ಉತ್ತಮವಾಗಿರಲಿದೆ ಎಂದು ಹಾರೋಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ರಾಮಲಿಂಗಪ್ಪ ಟಿ.ಬೇಗೂರು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಏರ್ಪಡಿಸಿದ್ದ ‘ವೃತ್ತಿ ಕಟ್ಟಾಣಿಕೆ: ಸಾಧ್ಯತೆಗಳು’ ಎಂಬ ವಿಷಯ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಪ್ರತಿದಿನವೂ ಜೀವನದಲ್ಲಿ ಹೊಸದಾದ ಕಲಿಕೆಯ ಅಂಶ ಇದ್ದೇ ಇರುತ್ತದೆ. ಉದ್ಯೋಗ ಭದ್ರತೆ ಸಿಕ್ಕಿದರೆ ಕೆಲವರು ನಿವೃತ್ತಿ ಪಡೆದಂತಹ ಮನಸ್ಥಿತಿ ತಲುಪಿ ಬಿಡುತ್ತಾರೆ. ಆದರೆ, ಕಲಿಕೆ ಸದಾ ಜಾರಿಯಲ್ಲಿದ್ದರೆ ಯಾವುದು ಕಷ್ಟವಲ್ಲ. ಶಿಸ್ತಿನಿಂದ ಜೀವನ ರೂಪಿಸಿಕೊಂಡಾಗ ಮಾತ್ರ ಯಾವುದೆ ಪ್ರಯತ್ನದಲ್ಲಿ ಜಯಶೀಲರಾಗುತ್ತೇವೆ ಎಂದರು.
ವಿದ್ಯಾರ್ಥಿಗಳು ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಇರುವ ಹಲವು ಸಾಧ್ಯತೆ, ವಿವಿಧ ಇಲಾಖೆಗಳಲ್ಲಿ ಇರುವ ಹುದ್ದೆಗಳ ವಿವರ, ಅವುಗಳನ್ನು ಪಡೆಯಲು ಕ್ರಮಿಸಬಹುದಾದ ಮಾರ್ಗಗಳ ಬಗ್ಗೆ ತಿಳಿಹೇಳಲಾಯಿತು.
ಪ್ರಾಂಶುಪಾಲ ಪ್ರೊ.ತಿಮ್ಮಹನುಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸರಿಯಾದ ಗುರಿ, ಉದ್ದೇಶ ಇಟ್ಟುಕೊಳ್ಳಬೇಕು. ಶಿಕ್ಷಣದ ಜತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು. ಅದಕ್ಕೆ ತಕ್ಕ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಸಂಚಾಲಕ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಸ್.ಅರವಿಂದ, ಅಧ್ಯಾಪಕರಾದ ಪ್ರೊ.ಡಿ.ಸಾಯಿಪ್ರಸಾದ್, ಆನಂದ್, ಸಿದ್ದೇಶ್ವರಪ್ಪ, ಎಂ.ನಿರ್ಮಲಾ, ಸಂಗಮ್, ಕೃಷ್ಣೇಗೌಡ, ಯಲ್ಲಣ್ಣ, ಶಿವಕುಮಾರ್, ಆಶಾ ಇದ್ದರು.