ಗೋಕರ್ಣ: ಇಲ್ಲಿನ ಮುಖ್ಯ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಗುರುವಾರ ನಡೆದಿದೆ.
ಬೆಂಗಳೂರು ವಿಜಯನಗರ ನಿವಾಸಿಗಳಾದ ಪ್ರತೀಕ ಪಾಲಾಕ್ಷಪ್ಪ(32) ಮತ್ತು ರವಿ ನಾಗರಾಜ ಟಿ.ಡಿ. ಮೃತರು. ಎಂಟು ಯುವಕರು ಬೆಂಗಳೂರಿನಿಂದ ಬಂದಿದ್ದು ಇವರ ಪೈಕಿ ಐವರು ಮೇನ್ ಬೀಚ್‌ನಿಂದ ದೂರದಲ್ಲಿ ನೀರಿಗಿಳಿದಿದ್ದರು. ಮುಳುಗುತ್ತಿದ್ದವರನ್ನು ಜತೆಗಿದ್ದ ಉಳಿದ ಮೂವರು ದಡಕ್ಕೆ ತಂದು ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಆಂಬುಲೆನ್ಸ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ತುರ್ತು ಚಿಕಿತ್ಸೆ ನೀಡಿ ಬದುಕಿಸಲು ಪ್ರಯತ್ನಿಸಿದರೂ ಸ್ಪಂದಿಸದೆ ಇಬ್ಬರು ಮೃತಪಟ್ಟರು ಎನ್ನಲಾಗಿದೆ. ಖಾಸಗಿ ಕಂಪನಿ ಉದ್ಯೋಗಿಗಳಾಗಿರುವ ಇವರ ಪೈಕಿ ಪ್ರತೀಕ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ರವಿಯ ಪಾಲಕರು ಮೃತರಾಗಿದ್ದು ಸಹೋದರಿಯ ಜತೆಗಿದ್ದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.