ಮುಂಡಗೋಡ: ತಾಲೂಕಿನ ಯರೇಬೈಲ್ ಗ್ರಾಮದಿಂದ ಗುಂಜಾವತಿವರೆಗಿನ ರಸ್ತೆ ಅಗೆದು ಕಡಿ ಹಾಕಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದ ಯರೇಬೈಲ್ ಮತ್ತು ಬಸನಾಳ ಗ್ರಾಮಸ್ಥರು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಂದಿಕಟ್ಟಾ ಗ್ರಾ.ಪಂ. ವ್ಯಾಪ್ತಿಯ ಯರೇಬೈಲ್ ಗ್ರಾಮದಿಂದ ಪ್ರಾರಂಭವಾಗುವ ರಸ್ತೆಯು ಗುಂಜಾವತಿವರೆಗೆ ಸುಮಾರು 7ಕಿ.ಮೀ. ಇದೆ. ಎರಡು ವರ್ಷದ ಹಿಂದೆಯೇ ಅಗೆದು ಕಡಿ ಹಾಕಿ ಕಾಮಗಾರಿ ಪೂರ್ಣ ಮಾಡದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಹದಗೆಟ್ಟ ರಸ್ತೆಯಲ್ಲಿ ದಿನ ನಿತ್ಯ ಓಡಾಡುವ ವಾಹನ ಚಾಲಕರಿಗೆ ಮತ್ತು ಬೈಕ್ ಸವಾರರಿಗೆ ತೊಂದರೆಯುಂಟಾಗಿದೆ.
ರಾತ್ರಿ ವೇಳೆ ಈ ರಸ್ತೆಯಲ್ಲಿ ನಿಧಾನವಾಗಿ ವಾಹನಗಳನ್ನು ಚಲಾಯಿಸುವಾಗ ಕಾಡು ಪ್ರಾಣಿಗಳ ಕಾಟ ತಪ್ಪಿದ್ದಲ್ಲ. ಹಾಗಂತ ಸ್ಪೀಡ್ ಆಗಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾಮಗಾರಿಗೆ ಆದೇಶವಿದ್ದರೂ ಏಕೆ ಮಾಡುತ್ತಿಲ್ಲ? ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಕರೊನಾ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಕರೊನಾ ಮಧ್ಯೆಯೇ ಹಲವೆಡೆ ಕಾಮಗಾರಿಗಳು ಪ್ರಾರಂಭವಾಗಿವೆ. ಯರೇಬೈಲ್ನಿಂದ ಗುಂಜಾವತಿವರೆಗಿನ ರಸ್ತೆಗೆ ಮಾತ್ರ ಮುಹೂರ್ತ ಕೂಡಿ ಬಂದಿಲ್ಲ ಎಂಬುದು ಸ್ಥಳೀಯರ ಮಾತು.
ಪಿಡಬ್ಲು್ಯಡಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು ಮೌನವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ತಕ್ಷಣ ವರದಿ ತರಿಸಿಕೊಂಡು ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಮತ್ತು ಪಿಡಬ್ಲು್ಯಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಲ್ಲವಾದರೆ ಪಿಡಬ್ಲು್ಯಡಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಯರೇಬೈಲ್ ಮತ್ತು ಬಸನಾಳದ ವಿಠ್ಠು ಎಡಗೆ, ಫಕೀರಪ್ಪ ಚೌರಿ, ಸಗ್ಗೂಬಾಯಿ ಎಡಗೆ, ರಾಮು ಕೋಕರೆ, ವಿಠ್ಠಲ ವರಕ್, ಬೋರು ವರಕ್ ಎಚ್ಚರಿಸಿದ್ದಾರೆ.
ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗುತ್ತಿಗೆದಾರರ ಜತೆ ಮಾತನಾಡಿ ಕಾಮಗಾರಿ ಆರಂಭಿಸಲು ಕ್ರಮ ವಹಿಸುತ್ತೇನೆ.| ದಯಾನಂದ ಬಿ.ಆರ್., ಪಿಡಬ್ಲು್ಯಡಿ ಎಇಇ