ಮಗನನ್ನು ಕಳೆದುಕೊಂಡ ತಾಯಿಯ ರೋದನ  
ಜಿಲ್ಲೆ

ಕಾಣೆಯಾಗಿದ್ದ ಮಗು, ಶವ ಬೋರ್​ವೆಲ್​ನಲ್ಲಿ ಪತ್ತೆ!; ಅಪ್ಪನೇ ಕೊಲೆ ಮಾಡಿದನಾ?

ಚಿಕ್ಕೋಡಿ: ಎರಡು ವರ್ಷದ ಮಗು ನಿನ್ನೆ ಕಾಣೆಯಾಗಿದ್ದು, ಅದು ಇಂದು ಮನೆಗೆ ಸಮೀಪದ ಬೋರ್​ವೆಲ್​​ನಲ್ಲಿ ಶವವಾಗಿ ಪತ್ತೆಯಾಗಿದೆ. ವಿಚಿತ್ರವೆಂದರೆ ಈ ಸಾವಿಗೆ ಸಂಬಂಧಿಸಿದಂತೆ ಮಗುವಿನ ತಂದೆಯ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಾರೂಗೇರಿಯ ಶರತ್ ಸಿದ್ದಪ್ಪ ಹಸರೆ (2) ಮೃತಪಟ್ಟಿರುವ ಬಾಲಕ. ನಿನ್ನೆ ಕಾಣೆಯಾಗಿದ್ದ ಈತನ ಸಲುವಾಗಿ ಅಪಹರಣ ಆಗಿರಬಹುದು ಎಂದು ಅನುಮಾನಿಸಿ ಹಾರೂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದ.

ಆದರೆ ಇಂದು ಮನೆಯಿಂದ ನೂರು ಮೀಟರ್ ದೂರದಲ್ಲಿರುವ ಬೋರ್​ವೆಲ್​ನಲ್ಲಿ ಸುಮಾರು 7 ಅಡಿ ಆಳದಲ್ಲಿ ಮಗು ಸಿಲುಕಿರುವುದು ಕಂಡುಬಂದಿತ್ತು. ಬಳಿಕ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮಗುವಿನ ಶವ ಹೊರತೆಗೆದಿದ್ದರು.

ಈ ಸಾವಿನ ಕುರಿತು ಬಾಲಕನ ತಂದೆಯ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಅಪ್ಪನೇ ಹೊಡೆದು ಸಾಯಿಸಿ ಬೋರ್​ವೆಲ್​ ಒಳಕ್ಕೆ ಹಾಕಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಕನ ಶವವನ್ನು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.