ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬೆಂಗಳೂರು ಉತ್ತರ ತಾಲೂಕು ಕಡಬಗೆರೆ ಕ್ರಾಸ್ ಬಳಿಯ ಶಿವಾನಿ ಗ್ರೀಲ್ಸ್ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದಾರೆ.
ಬಿಹಾರ ಮೂಲದ ಉದಯ್‌ಬಾನು(30), ರೂಸನ್(28) ಮೃತರು.
ಶಿವಾನಿ ಗ್ರೀಲ್ಸ್ ಬಡಾವಣೆ ನಿವಾಸಿ ಸತೀಶ್ ಎಂಬುವರು ಮನೆ ನಿರ್ಮಾಣ ಮಾಡುತ್ತಿದ್ದು, ಬಿಹಾರ ಮೂಲದ ಉದಯ್ ಹಾಗೂ ರೂಸನ್ ಸೇರಿ ನಾಲ್ಕೈದು ಮಂದಿ ಮನೆಯ ಒಳ ವಿನ್ಯಾಸ ಕಾಮಗಾರಿಯಲ್ಲಿ ತೊಡಗಿಸಿಕೊಂಡು ನಿರ್ಮಾಣ ಹಂತದಲ್ಲಿದ್ದ ಅದೇ ಮನೆಯಲ್ಲೇ ವಾಸವಾಗಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲಸ ಮಾಡುತ್ತಿದ್ದ ಐವರ ಪೈಕಿ ಇಬ್ಬರು ಬೆಂಕಿಯಲ್ಲಿ ಸಿಲುಕಿ ನರಳಿ ಪ್ರಾಣ ಬಿಟ್ಟಿದ್ದಾರೆ ಉಳಿದ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮಾದನಾಯಕನಹಳ್ಳಿ ಠಾಣೆ ಹಾಗೂ ಆಗ್ನಿ ಶಾಮಕ ಠಾಣೆ ಸೇರಿ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿತ್ತು. ಅಧಿಕಾರಿಗಳು ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿನಂದಿಸಿದ ಬಳಿಕ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರ ಇಳಿದು ಪಾರು:
ಅಗ್ನಿ ಅವಘಡ ಸಂಭವಿಸಿದ ನಿರ್ಮಾಣ ಹಂತದ ಕಟ್ಟಡ ಡುಪ್ಲೆಕ್ಸ್ ಕಟ್ಟಡವಾಗಿದ್ದು, ಮರಗೆಲಸ ಮತ್ತಿತರ ಒಳವಿನ್ಯಾಸ ಮಾಡುತ್ತಿದ್ದ ಕಾರ್ಮಿಕರು ಮನೆಯ ಕೊನೆ ಮಹಡಿಯಲ್ಲಿ ಕಾರ್ಯನಿರತರಾಗಿದ್ದರು. ಎರಡನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆರಂಭದಲ್ಲಿ ಮೇಲಿನ ಮಹಡಿಯಲ್ಲಿದ್ದ ಕಾರ್ಮಿಕರ ಅರಿವಿಗೆ ಬಂದಿರಲಿಲ್ಲ. ದಟ್ಟಹೊಗೆಯೊಂದಿಗೆ ಬೆಂಕಿ ಹೊತ್ತಿಕೊಂಡಿದ್ದು ಗಾಬರಿಗೊಂಡ ಕಾರ್ಮಿಕರು ಪಾರಾಗಲು ಹರಸಾಹಸ ನಡೆಸಿದ್ದಾರೆ. ಡ್ಯುಪೆಕ್ಸ್ ಆಗಿದ್ದರಿಂದ ಒಂದೆ ಮಾರ್ಗದಲ್ಲಿ ಕೆಳಗಿಳಿಯಲು ಸಾಧ್ಯವಾಗಿಲ್ಲ. ಅಲ್ಲದೆ ಕಟ್ಟಡದಲ್ಲಿ ಗೋಡೆ ಸೇರಿ ಭಾಗಶಃ ಎಲ್ಲ ಕಡೆಗಳಲ್ಲಿ ಮರಗೆಲಸ ಮಾಡಿದ್ದರಿಂದ ಬೆಂಕಿ ದಟ್ಟವಾಗಿದೆ. ಹೊಗೆಗೆ ಉಸಿಕಟ್ಟಿದಂತಾಗಿ ಪರದಾಡಿದ್ದ ಇಬ್ಬರು ಕಾರ್ಮಿಕರು ಕಡೆಗೆ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇದರಲ್ಲಿ ಓರ್ವ ಪಕ್ಕದಲ್ಲಿದ್ದ ತೆಂಗಿನ ಮರದ ಸಹಾಯದಿಂದ ಇಳಿದು ಪಾರಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾದ ಮೂವರು ಕಾರ್ಮಿಕರಿಗೆ ಪ್ರಾಥಮಿಕ ಚಿಕಿತ್ಸೆ ದೊರೆಕಿಸಿಕೊಡಲಾಗಿದ್ದು ಯಾವುದೇ ತೊಂದರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.