ಮೂಡಿಗೆರೆ ತಾಲೂಕಿನ ಮುದ್ರೆಮನೆ ಸಮೀಪದಲ್ಲಿ ಕಾಡುಕೋಣ ದಾಳಿಯಿಂದ ವಾಹನ ಜಖಂಗೊಂಡಿರುವುದು. 
ಜಿಲ್ಲೆ

ಕಾಡುಕೋಣ ದಾಳಿಗೆ ಇಬ್ಬರು ಕಾರ್ಮಿಕರಿಗೆ ಗಾಯ

ಮೂಡಿಗೆರೆ: ಮುದ್ರೆಮನೆ ಸಮೀಪ ಬುಧವಾರ ಕಟ್ಟಿಗೆ ತರಲೆಂದು ಗೂಡ್ಸ್ ವಾಹನದಲ್ಲಿ ತೆರಳುತ್ತಿದ್ದ್ದ ಕೂಲಿ ಕಾರ್ಮಿಕರ ಮೇಲೆ ಕಾಡುಕೋಣ ದಾಳಿ ನಡೆಸಿದ್ದರಿಂದ ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಹೊಯ್ಸಳಲು ಗ್ರಾಮದ ಸುಮಾರು 6 ಕೂಲಿ ಕಾರ್ಮಿಕರು ಮುದ್ರೆಮನೆ ಸಮೀಪದ ಗಿರಿಜಾ ರಮೇಶ್ ಎಂಬುವರ ತೋಟದಿಂದ ಕಟ್ಟಿಗೆ ತರಲೆಂದು ಬೆಳಗ್ಗೆ ಗೂಡ್ಸ್ ವಾಹನದಲ್ಲಿ ತೆರಳಿದ್ದರು. ರಸ್ತೆ ತಿರುವಿನಲ್ಲಿ ಕಾಡುಕೋಣ ಎದುರಾಗಿದೆ. ಕಾಡುಕೋಣ ಸ್ಥಳದಿಂದ ತೆರಳಿದ ಬಳಿಕ ಮುಂದೆ ಸಾಗಲೆಂದು ಚಾಲಕ ವಾಹನವನ್ನು ದೂರದಲ್ಲಿಯೇ ನಿಲ್ಲಿಸಿದ್ದಾನೆ. ಆದರೆ ನೋಡನೋಡುತ್ತಿದ್ದಂತೆ ಕಾಡುಕೋಣ ವಾಹನದ ಮೇಲೆ ದಾಳಿ ನಡೆಸಿದೆ. ವಾಹನದ ಬಾಗಿಲಿಗೆ ಗುದ್ದಲಾರಂಭಿಸಿದೆ. ಭಯದಿಂದ ವಾಹನದಲ್ಲಿದ್ದವರೆಲ್ಲ ಓಡಿ ತಪ್ಪಿಸಿಕೊಂಡಿದ್ದಾರೆ. ಕೂಲಿ ಕಾರ್ಮಿಕರಾದ ದಿನೇಶ್ ಹಾಗೂ ಜಗದೀಶ್ ವಾಹನದಿಂದ ಹೊರಗೆ ಹಾರಿದಾಗ ಅವರ ಮೇಲೆ ಕಾಡುಕೋಣ ದಾಳಿ ನಡೆಸಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕು ಸಾಗಣೆ ವಾಹನ ನಜ್ಜುಗುಜ್ಜಾಗಿದೆ.