ಜಿಲ್ಲೆ

ವಾಹನ ಕಳ್ಳನ ಬಂಧನ : 1.14 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ಜಪ್ತಿ

ಬೆಂಗಳೂರು: ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿನಗರದ ಚನ್ನಸಂದ್ರ ಲೇಔಟ್ ನಿವಾಸಿ ಮಂಜುನಾಥ ಅಲಿಯಾಸ್ ಮಂಜ(36) ಬಂಧಿತ. ಆರೋಪಿಯಿಂದ 1.14 ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕೆಂಗೇರಿ ಕೋಟಿ ಬೀದಿ ಮಾರಪ್ಪ ದೇವಸ್ಥಾನ ಸಮೀಪದ ನಿವಾಸಿ ನಾರಾಯಣಮೂರ್ತಿ ಅವರು ಆ.೧೮ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನವನ್ನು ಮನೆ ಬಳಿ ನಿಲುಗಡೆ ಮಾಡಿದ್ದರು. ಮರು ದಿನ ಬೆಳಗ್ಗೆ ನೋಡಿದಾಗ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಅಪರಾಧ ಹಿನ್ನೆಲೆವುಳ್ಳವನಾಗಿದ್ದು, ತನ್ನ ದುಶ್ಚಟಗಳಿಗೆ ಸುಲಭವಾಗಿ ಹಣ ಹೊಂದಿಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ. ನಗರದ ವಿವಿಧೆಡೆ ಓಡಾಡಿ ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನವನ್ನು ಗ್ರಾಹಕರನ್ನು ಹುಡುಕಿ ಮಾರಾಟ ಮಾಡಿ ಹಣ ಪಡೆದು ಮೋಜು ಮಾಡುತ್ತಿದ್ದ. ಆರೋಪಿಯ ಬಂಧನದಿಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.