ಜಿಲ್ಲೆ

19ರಿಂದ 22ರವರೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರ ನಿಷೇಧ

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ಜರುಗುವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತಾ ದೃಷ್ಟಿಯಿಂದ ಅ.19ರಿಂದ 22ರವರೆಗೆ ಬೆಟ್ಟಕ್ಕೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮ.ಬೆಟ್ಟಕ್ಕೆ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಹಾಗಾಗಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಪ್ರಕಾಶ್ ಅವರ ಗಾರ್ಡನ್‌ನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ದ್ವಿಚಕ್ರ, ತ್ರಿಚಕ್ರ(ಆಟೋರಿಕ್ಷಾ, ಗೂಡ್ಸ್ ವಾಹನ ಸೇರಿದಂತೆ) ಪ್ರವೇಶವನ್ನು ಸಂಪೂರ್ಣ ನಿಷೇಧಿಸುವ ಅವಶ್ಯಕತೆ ಇದೆ. ಈ ಸಂಬಂಧ ಪಾರ್ಕಿಂಗ್‌ಗೆ ಬೇಕಾದ ಎಲ್ಲಾ ವ್ಯವಸ್ಥೆ, ಜತೆಗೆ ಭಕ್ತರು ವಾಹನ ನಿಲುಗಡೆ ಸ್ಥಳದಿಂದ ಮ.ಬೆಟ್ಟಕ್ಕೆ ತೆರಳಲು ಅಗತ್ಯ ಸಾರಿಗೆ ಸೌಲಭ್ಯವನ್ನು ಒದಗಿಸುವ ಸಂಬಂಧ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿ ಅವರಲ್ಲಿ ಕೋರಿದ್ದರು.

ಜಿಲ್ಲಾಧಿಕಾರಿ ಅವರು ಮ.ಬೆಟ್ಟದ ರಸ್ತೆಯು ಅರಣ್ಯ ಪ್ರದೇಶ ಹಾಗೂ ತೀವ್ರ ತಿರುವಿನಿಂದ ಕೂಡಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಕಾನೂನು ವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅ.19 ರ ಬೆಳಗ್ಗೆ 6 ರಿಂದ 22ರ ಸಂಜೆ 7 ಗಂಟೆವರೆಗೆ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರವನ್ನು ತಾತ್ಕಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.