ಜಿಲ್ಲೆ

ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ರವಿ ಎಸ್. ಬಳೂಟಗಿ

ನರಗುಂದ: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಗುಮಾನಿ ಮೇಲೆ ಇಬ್ಬರು ಯುವಕರ ಮೇಲೆ ಗುಂಪೊಂದು ದೊಣ್ಣೆ, ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಪಟ್ಟಣದ ಹೊರವಲಯದ ಕುರ್ಲಗೇರಿ ರಸ್ತೆಯಲ್ಲಿ ಶನಿವಾರ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಬಸವರಾಜ ಮಮಟಗೇರಿ, ಮಲ್ಲಿಕಾರ್ಜುನ (ಗುಂಡ್ಯಾ) ಹಿರೇಮಠ, ಶರಣಪ್ಪ ಹಂಚಿನಾಳ, ದೇವರಾಜ ಕಮ್ಮಾರ, ಕಿರಣ ಬೇವಿನಗಿಡದ, ಧೀರಜ್ ಮಹಾಲಿಂಗಪ್ಪ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಜಯ್ (ಅಜ್ಜು) ಅಣ್ಣಿಗೇರಿ, ಸಚಿನ್ ಶಿರಸಂಗಿ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಎಸ್ಪಿ ಬಿ.ಎಸ್. ನೇಮಗೌಡ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಇಡೀ ರಾತ್ರಿ ನರಗುಂದದಲ್ಲೇ ಠಿಕಾಣಿ ಹೂಡಿತ್ತು. ಪಟ್ಟಣದಾದ್ಯಂತ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರು ಡಿವೈಎಸ್ಪಿ, 6 ಇನ್‌ಸ್ಪೆಕ್ಟರ್, ಇಬ್ಬರು ಸಬ್ ಇನ್‌ಸ್ಪೆಕ್ಟರ್, 80 ಪೊಲೀಸ್ ಪೇದೆ, 1 ಕೆಎಸ್‌ಆರ್‌ಪಿ, 1 ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಡಿವೈಎಸ್ಪಿ ಟಿ.ಆರ್. ಪಾಟೀಲ ‘ವಿಜಯವಾಣಿ’ಗೆ ತಿಳಿಸಿದರು.

ಏನಿದು ಘಟನೆ: ಪಟ್ಟಣದ ಮಾರುತಿನಗರ ಬಡಾವಣೆಯ ಅಶ್ಪಾಕ್ ಖಾಸೀಮಸಾಬ್ ಬೇಪಾರಿ ಹಾಗೂ ಆತನ ಅಳಿಯ ಮಹಮ್ಮದ್‌ಗೌಸ್ ಖಲೀಲ್‌ಸಾಬ್ ಬೇಪಾರಿ ತಮ್ಮ ವಾಹನದಲ್ಲಿ ತಾಲೂಕಿನ ಭೈರನಹಟ್ಟಿಯಿಂದ ಗದಗ ಜಾನುವಾರುಗಳ ಸಂತೆಗೆ ಎರಡು ಎತ್ತುಗಳನ್ನು ಮಾರಾಟ ಮಾಡಲು ಶನಿವಾರ ತೆರಳಿದ್ದರು. ಎತ್ತು ಮಾರಾಟದ ಬಳಿಕ ಗದಗನಿಂದ ಸಂಜೆ ನರಗುಂದಕ್ಕೆ ಖಾಲಿ ಗಾಡಿ ಬರುತ್ತಿತ್ತು. ಈ ವೇಳೆ ನರಗುಂದದ ಇಮಾಮಸಾಬ್ ಬಸಾಪುರ ಅವರು ತಮ್ಮ ಮಾರಾಟವಾಗದ ಎಮ್ಮೆ ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದ್ದರಿಂದ ಕುರ್ಲಗೇರಿ ಒಳರಸ್ತೆ ಮಾರ್ಗವಾಗಿ ನರಗುಂದಕ್ಕೆ ಆಗಮಿಸುತ್ತಿದ್ದರು. ಈ ವೇಳೆ ವಾಹನದ ಡೀಸೆಲ್ ಖಾಲಿ ಆಗಿದ್ದರಿಂದ ವಾಹನವನ್ನು ನರಗುಂದದ ಕುರ್ಲಗೇರಿ ಕ್ರಾಸ್‌ನಲ್ಲಿ ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದರು. ಇದೇ ರಸ್ತೆ ಮಾರ್ಗವಾಗಿ ತೆರಳುತ್ತಿದ್ದ 15 ರಿಂದ 20 ಯುವಕರ ಗುಂಪು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಅವಾಚ್ಯ ಪದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ವಾಹನದ ಚಾಲಕ ಮಹಮ್ಮದ್‌ಗೌಸ್ ಬೇಪಾರಿ ಅವರ ತಲೆ, ಕೈ-ಕಾಲು, ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ಪಾಕ ಬೇಪಾರಿ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ.