ಜಿಲ್ಲೆ

ಇವರು ಅಂಥಿಂಥ ಕಳ್ಳರಲ್ಲ: ಇವರ ಬಳಿ ಇತ್ತು ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನ!

Webdesk - Ravikanth

ಚಿಕ್ಕಮಗಳೂರು: ಕಾಫಿನಾಡಿನ ಪೊಲೀಸರು ಭಾರಿ ಕಳ್ಳರನ್ನೇ ಹಿಡಿದಿದ್ದಾರೆ. ಅಷ್ಟಕ್ಕೂ ಇವರು ಅಂಥಿಂಥ ಕಳ್ಳರಲ್ಲ. ಏಕೆಂದರೆ ಇವರ ಬಳಿ ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನವಿತ್ತು. ಚಿಕ್ಕಮಗಳೂರು ಸಿಇಎನ್​ ಇನ್​ಸ್ಪೆಕ್ಟರ್ ರಕ್ಷಿತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದೆ.

ಪುರಾತನ ರತ್ನವನ್ನು ಕದ್ದಿರುವ ಈ ಕಳ್ಳರು ಭಯಂಕರ ಇತಿಹಾಸವನ್ನೇ ಹೊಂದಿದ್ದಾರೆ. ಇವರ ಬಳಿ ನಕಲಿ ನೋಟುಗಳು ಕೂಡ ಪತ್ತೆಯಾಗಿವೆ. ಈ ಕಳ್ಳರಿಂದ 5.5 ಲಕ್ಷ ರೂಪಾಯಿಯಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು, ಮೈಸೂರು ಶಿವಮೊಗ್ಗ, ಹಾಸನ ಸೇರಿ ಹಲವೆಡೆ ಸಕ್ರಿಯವಾಗಿದ್ದ ಇವರ ತಂಡ, ಮನೆಗಳಿಗೆ ನುಗ್ಗಿ ನಾಯಿಗಳಿಗೆ ವಿಷ ಹಾಕಿ ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 3 ಕಾರು, 5 ಮೊಬೈಲ್ ಫೋನ್​, ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೂಡ ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾತ್ರವಲ್ಲದೆ ಇವರು ಕೇರಳದ ಹೈಟೆಕ್ ವೇಶ್ಯವಾಟಿಕೆ ದಂಧೆಯಲ್ಲೂ ಪಾಲ್ಗೊಂಡಿದ್ದು, ಅದಕ್ಕೆ ಸಂಬಂಧಿಸಿದ ಕೇಸ್​ನಿಂದ ತಲೆಮರೆಸಿಕೊಂಡಿದ್ದರು. ರತ್ನ ಇತ್ಯಾದಿ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.