ಜಿಲ್ಲೆ

ಅಪಘಾತಕ್ಕೆ ವಿದ್ಯಾರ್ಥಿಗಳಿಬ್ಬರು ಬಲಿ

ಆನೇಕಲ್​: ಕುಡಿದ ಮತ್ತಿನಲ್ಲಿ ಜಾಲಿ ರೇಡ್​ ಹೊರಟಿದ್ದ ಸ್ನೇಹಿತರ ಕಾರು ಬನ್ನೇರುಟ್ಟ ಸಮೀಪದ ರಾಗಿಹಳ್ಳಿ ಬಳಿ ಸೋಮವಾರ ರಾತ್ರಿ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ಅರ್ಶು(25), ಸಾವುಕ್​ (26) ಮೃತಪಟ್ಟಿದ್ದು, ಗಾಯಗೊಂಡ ದೇವನಾರಾಯಣ ಹಾಗೂ ಸ್ನೇಹಿತ ಸಾಹಿಲ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಗಿಹಳ್ಳಿ ಕಾಡಿನ ರಸ್ತೆಯಲ್ಲಿ ಸೋಮವಾರ ರಾತ್ರಿ 11.45ರ ಸಮಯದಲ್ಲಿ ಕೇರಳ ಮೂಲದ

ನಾಲ್ವರು ಎಂಬಿಎ ವಿದ್ಯಾರ್ಥಿಗಳು ಹಾಗೂ ಸ್ನೇಹಿತನೊಬ್ಬ ಸೇರಿ ಕುಡಿದ ಮತ್ತಿನಲ್ಲಿ ಜಾಲಿ ರೇಡ್​ ಹೊರಟಿದ್ದಾರೆ. ಆದರೆ ವೇಗವಾಗಿ ಕಾರು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಒಳಗೆ ಇದ್ದವರು ಹೊರಗೆ ಬಿದ್ದಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ರವಾನೆ ಮಾಡಿದ್ದು, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.