ಶಿವಮೊಗ್ಗ: ಪತಿಯನ್ನು ಕೊಂದ ಮಹಿಳೆ ಸೇರಿ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ಮೃತದೇಹ ವಾಹನದಲ್ಲಿ ಸಾಗಿಸಿದ್ದ ಆರೋಪದಲ್ಲಿ ಮೂವರಿಗೆ ತಲಾ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.
ಶಿವಮೊಗ್ಗ ಹನುಮಂತನಗರದ ನಾಗವೇಣಿ (27) ಮತ್ತು ಜಹೀರಾಬಿ (41) ಜೀವಾವಧಿ ಶಿಕ್ಷೆ, ತಲಾ 25 ಸಾವಿರ ರೂ. ದಂಡ ವಿಧಿಸಿದ್ದು ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ ನಾಲ್ಕು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಇನ್ನುಳಿದಂತೆ ಹನುಮಂತನಗರದ ಜಬೀವುಲ್ಲಾ (23), ಮೊಹಮ್ಮದ್ ಇಮ್ರಾನ್(25) ಮತ್ತು ಚಂದ್ರಕುಮಾರ್ (24) ಅವರಿಗೆ ತಲಾ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 3 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
2018ರ ಫೆ.12ರಂದು ಹನುಮಂತನಗರದಲ್ಲಿ ಸಂತೋಷ್ ಅಲಿಯಾಸ್ ಜೈಲರ್(34) ಹತ್ಯೆಯಾಗಿತ್ತು. ಸಂತೋಷ್ ಮತ್ತು ಪತ್ನಿ ನಾಗವೇಣಿ ನಡುವೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಆವತ್ತು ಕೂಡ ಜಗಳವಾಗಿದ್ದು ಸಂತೋಷ್‌ನನ್ನು ಪತ್ನಿ ನಾಗವೇಣಿ ಮತ್ತು ಅದೇ ಬಡಾವಣೆಯ ಜಹೀರಾಬಿ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದರು. ಬಳಿಕ ಜಬೀವುಲ್ಲಾ, ಮೊಹಮ್ಮದ್ ಇಮ್ರಾನ್ ಮತ್ತು ಚಂದ್ರಕುಮಾರ್ ಓಮ್ನಿಯಲ್ಲಿ ಮೃತದೇಹವನ್ನು ಸಾಗಿಸಿ ಸವಳಂಗ ರಸ್ತೆಯಲ್ಲಿ ಎಸೆದಿದ್ದರು. ಈ ಬಗ್ಗೆ ಮೃತ ಸಂತೋಷ್ ಸಹೋದರ ಜಯನಗರ ಠಾಣೆಗೆ ದೂರು ನೀಡಿದ್ದರು.
ಅಂದಿನ ತನಿಖಾಧಿಕಾರಿಯಾಗಿದ್ದ ಕೋಟೆ ಠಾಣೆಯ ವೃತ್ತ ನಿರೀಕ್ಷಕ ಜಿ.ದೇವರಾಜ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ್ ನಾಯಕ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಜೀವಾವಧಿ ಮತ್ತು ಮೂವರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್‌ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.