ಮಳವಳ್ಳಿ: ಪಟ್ಟಣದ ಪ್ರತ್ಯೇಕ ಬಡಾವಣೆಗಳಲ್ಲಿ ಡೆಂಘೆ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದ ಯುವಕ, ಯುವತಿ ಸೇರಿ ಇಬ್ಬರು ಶನಿವಾರ ಮೈಸೂರಿನ ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ.
ಪಟ್ಟಣದ ಎನ್‌ಇಎಸ್ ಬಡಾವಣೆ ನಿವಾಸಿ ಪ್ರಕಾಶ್ ಎಂಬುವರ ಪುತ್ರಿ ಹರ್ಷಿತಾ(25) ಹಾಗೂ ಸಿದ್ಧಾರ್ಥ ಬಡಾವಣೆ ಲೇ.ಕೃಷ್ಣ ಅವರ ಪುತ್ರ ಸಿದ್ಧಾರ್ಥ(28) ಮೃತರು.
ಹರ್ಷಿತಾ ಭರತನಾಟ್ಯ ಶಿಕ್ಷಕಿಯಾಗಿದ್ದು, ಇವರಿಗೆ ಕಳೆದ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಸ್ಥಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣವಾಗದ ಹಿನ್ನೆಲೆಯಲ್ಲಿ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯ ವೇಳೆ ಬಿಳಿರಕ್ತ ಕಣಗಳು ಯುವತಿಯ ದೇಹದಲ್ಲಿ ನಾಶವಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹಲವು ರಕ್ತ ಮಾದರಿ ಪರೀಕ್ಷೆ ನಡೆಸಲಾಗಿ ಡೆಂೆ ಜ್ವರ ಲಕ್ಷಣಗಳೆಂದು ತಿಳಿದುಬಂದಿದೆ. ಚಿಕಿತ್ಸೆ ನೀಡಿದರೂ ಶನಿವಾರ ಸಂಜೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಿದ್ಧಾರ್ಥ ಎಂಬ ಯುವಕ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದು, ಇವರೂ ಕೆಲ ದಿನಗಳಿಂದೀಚೆಗೆ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಭಾನುವಾರ ಪಟ್ಟಣದ ಹೊರವಲಯದ ಸಾರ್ವಜನಿಕ ವಿವಿಧ ರುದ್ರಭೂಮಿಗಳಲ್ಲಿ ಇಬ್ಬರ ಅಂತ್ಯಕ್ರಿಯೆ ನಡೆಯಿತು.