ಬೆಂಗಳೂರು ಗ್ರಾಮಾಂತರ: ಕ್ರಿಕೆಟ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಚಾಕು ಇರಿತಕ್ಕೊಳಗಾದ ಇಬ್ಬರು ಯುವಕರು ಸಾವಿಗೀಡಾಗಿರುವ ಪ್ರಕರಣ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲದಲ್ಲಿ ಶುಕ್ರವಾರ ನಡೆದಿದೆ. ದೊಡ್ಡಬೆಳವಂಗಲ ನಿವಾಸಿ ಭರತ್ (23), ಪ್ರತೀಕ್ (17) ಮೃತಪಟ್ಟವರು.
ವಾಹನ ಪಾರ್ಕಿಂಗ್ ಕಿರಿಕ್: ದೊಡ್ಡಬೆಳವಂಗಲದ ಸರ್ಕಾರಿ ಕಾಲೇಜು ಮೈದಾನದಲ್ಲಿ ದೊಡ್ಡಬೆಳವಂಗಲ ಹೋಬಳಿ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರಥಮ ವರ್ಷದ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿತ್ತು. ಮೈದಾನದಲ್ಲಿ ನಿಲ್ಲಿಸಿದ್ದ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ದೊಡ್ಡಬೆಳವಂಗಲ ಹಾಗೂ ಹುಲಿಕುಂಟೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿದೆ. ಆರಂಭದಲ್ಲಿ ಎರಡೂ ಕಡೆಯವರಿಂದ ಮಾತಿನ ಚಕಮಕಿ ನಡೆದಿದೆ, ಬಳಿಕ ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ.
ಚಾಕುವಿನಿಂದ ಇರಿದರು: ಈ ವೇಳೆ ಭರತ್ ಹಾಗೂ ಪ್ರತೀಕ್ ಮೇಲೆ ದಾಳಿ ನಡೆಸಿದ ಎದುರಾಳಿ ತಂಡದವರು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಯುವಕರನ್ನು ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಂಜಾ ನಶೆ: ದೊಡ್ಡಬೆಳವಂಗಲದ ಸರ್ಕಾರಿ ಕಾಲೇಜು ಆಟದ ಮೈದಾನದಲ್ಲಿ ನಿಲ್ಲಿಸಲಾಗಿದ್ದ ಸ್ವಿಫ್ಟ್ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇರಿಸಲಾಗಿತ್ತು, ಹುಲಿಕುಂಟೆ ಯುವಕರು ಗಾಂಜಾ ಮತ್ತಿನಲ್ಲಿಲ್ಲಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ದೊಡ್ಡಬೆಳವಂಗಲ ಬಸ್ ನಿಲ್ದಾಣದ ಬಳಿ ಬಂದ ಪುಂಡರು ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದರು. ಅಲ್ಲಿದ್ದವರನ್ನು ಯಾವ ಊರು ಎಂದು ಪ್ರಶ್ನಿಸುತ್ತಿದ್ದ ಪುಂಡರು ದೊಡ್ಡಬೆಳವಂಗಲ ಎನ್ನುತ್ತಿದ್ದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ನಾಗರಾಜ್, ಪಿಐ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಸ್ಥಿತಿ: ದೊಡ್ಡಬೆಳವಂಗಲದಲ್ಲಿ ನಡೆದ ಜೋಡಿಕೊಲೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ, ಎರಡೂ ಊರುಗಳಲ್ಲಿ ಜನ ಉದ್ರಿಕ್ತಗೊಂಡಿದ್ದು ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ, ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಉದ್ರಿಕ್ತ ಯುವಕರ ಗುಂಪಿನತ್ತ ಲಾಠಿ ಪ್ರಹಾರ ನಡೆಸಿ ಚದುರಿಸಿದರು.