ಚಿಂತಾಮಣಿ: ತಾಲೂಕಿನ ಗೋಪಲ್ಲಿ ಹಾಗೂ ಜೋಗಯಾನಹಳ್ಳಿ ಮಾರ್ಗದ ಮದನಪಲ್ಲಿ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾಗಿದ್ದು, ಮೂವರ ಪರಿಸ್ಥಿತಿ ಗಂಭೀರವಾಗಿದೆ.
ಆಂಧ್ರ ಮೂಲದ ಧನಂಜಯ್ (45) ಮತ್ತು ಆತನ ತಾಯಿ ಕಲಾವತಿ (62) ಮೃತರು.
ಶೋಭಾ, ವಾನ್ವಿತಾ ಮತ್ತು ವಾದೇವಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಮದನಪಲ್ಲಿ ಮಾರ್ಗವಾಗಿ ತಿರುಪತಿಗೆ ಹೋಗುತ್ತಿದ್ದ ಖಾಸಗಿ ಬಸ್ ಕಡಪದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಶಾರ್ಟ್ ಸಕ್ಯೂರ್ಟ್‌ನಿಂದ ಕಾರು ಹೊತ್ತಿ ಉರಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದೆ. ಡಿವೈಎಸ್ಪಿ ಮುರಳೀಧರ್ ಮತ್ತು ಕೆಂಚಾರ್ಲಹಳ್ಳಿ ಠಾಣೆ ಸರ್ಕಲ್ ಇನ್‌ಸ್ಪೆಕ್ಟ್ಟರ್ ವೆಂಕಟರವಣಪ್ಪ, ಗ್ರಾವಾಂತರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಶಿವರಾಜ್, ಸಬ್ ಇನ್‌ಸ್ಪೆಕ್ಟರ್ ಮಮತಾ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಗುಚಿ ಬಿದ್ದ ಬಸ್
ಎರಡೂ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದವು. ಖಾಸಗಿ ಬಸ್ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ರಸ್ತೆಯಲ್ಲಿ ಕೆಲ ಮೀಟರ್ ದೂರದವರೆಗೂ ಎಳೆದುಕೊಂಡಿದೆ. ಇದರ ಘರ್ಷಣೆಯಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಶೋಭಾ, ವಾನ್ವಿತಾ ಮತ್ತು ವಾದೇವಿ ವಾಹನದಿಂದ ಹೊರಗೆ ಬಂದಿದ್ದಾರೆ. ಸ್ಥಳೀಯರು ಗಾಯಾಳುಗಳಿಗೆ ನೆರವು ನೀಡಿದ್ದಾರೆ. ಆದರೆ, ಕಾರಿನಲ್ಲಿ ಸಿಲುಕಿಕೊಂಡಿದ್ದ ಧನಂಜಯ್ ಹಾಗೂ ಕಲಾವತಿ ಹೊಬರಲು ಸಾಧ್ಯವಾಗದೆ ಸುಟ್ಟು ಕರಕಲಾಗಿದ್ದಾರೆ.
ಬಸ್ಸಿನಲ್ಲಿದ್ದವರಿಗೂ ಗಾಯ
ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ ಮಗುಚಿ ಬಿದ್ದ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಕಾರಿನಲ್ಲಿದ್ದವರ ಪರಿಸ್ಥಿತಿಯು ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಮತ್ತು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.