ಜಿಲ್ಲೆ

ಇಬ್ಬರು ಕೊಲೆ ಆರೋಪಿಗಳ ಬಂಧನ

ಕೋಲಾರ ಡೆಸ್ಕ್

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಲಹಳ್ಳಿಯಲ್ಲಿ ಇತ್ತೀಚೆಗೆ ಕೊಲೆ ಪ್ರಕರಣ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳು ನಾಲ್ಕು ದಿನಗಳ ಕಾಲ ಸತತವಾಗಿ ರೈಲಿನಲ್ಲಿ ಸುತ್ತಾಡುತ್ತಲೇ ಇದ್ದರು. ತನಿಖೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಕೊನೆಗೂ ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿ ಸಮೀಪ ಆರೋಪಿಗಳನ್ನು ಬಂಧಿಸಿದ್ದಾರೆ.

ಕೂಲಗುರ್ಕಿ ಗ್ರಾಮದ ಶ್ರೀಮೂರ್ತಿ (28), ಶಿವಶಂಕರ್​ (25) ಅಣ್ಣ ತಮ್ಮಂದಿರು ಬಂಧಿತರು.

ಸಣ್ಣ ಗಲಾಟೆ ವಿಚಾರವಾಗಿ ಮಾ.17ರಂದು ರಾತ್ರಿ 8.20ರಲ್ಲಿ ಸೋಮಯಾಜಲಹಳ್ಳಿಯಲ್ಲಿ ಮಂಜುನಾಥ (35) ಎಂಬಾತನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಬಾರ್​ನಲ್ಲಿ ಮಧ್ಯ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಎಂಜಲು ಉಗಿದ ಕಾರಣಕ್ಕೆ ಮೃತ ಮಂಜುನಾಥ ಮತ್ತು ಆರೋಪಿಗಳ ನಡುವೆ ಗಲಾಟೆಯಾಗಿತ್ತು. ಅದು ಅಲ್ಲಿಗೆ ತಣ್ಣಗಾದರೂ ಸಹ ಆರೋಪ ಶ್ರೀಮೂರ್ತಿ, ಮಂಜುನಾಥನನ್ನು ಕರೆಸಿಕೊಂಡು ಕೊಲೆ ಮಾಡಿದ್ದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಟನೆ ನಡೆದ ದಿನವೇ ಮಂಜುನಾಥ್​ ಕುಟುಂಬದವರು ಆರೋಪಿಯ ಮನೆಯನ್ನು ಸುಟ್ಟು ಹಾಕಿ, ಬಸ್​ ನಿಲ್ದಾಣ ಬಳಿ ಮೃತದೇಹವನ್ನು ಇಟ್ಟು ಪ್ರತಿಭಟಿಸಿದ್ದರು. ಇಬ್ಬರ ಬಂಧನವಾಗಿದ್ದು, ಪ್ರಮುಖ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ತಿಳಿಸಿದ್ದಾರೆ.