ಜಿಲ್ಲೆ

ಮತ್ತಿಬ್ಬರು ಮಾಲಾಧಾರಿಗಳ ಸಾವು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಸಾಯಿನಗರದ ಅಚ್ಚವ್ವನ ಕಾಲನಿಯಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೊಟದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಭಾನುವಾರ ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಕೆಎಂಸಿಆರ್‌ಐನಲ್ಲಿ ವಾರ್ಡ್ ಬಾಯ್ ಆಗಿದ್ದ ಧಾರವಾಡ ಸತ್ತೂರ ಆಶ್ರಯ ಕಾಲನಿಯ ಶಂಕರ ಪರಶುರಾಮ ಚವ್ಹಾಣ (29) ಹಾಗೂ ಸಾಯಿನಗರ ಅಚ್ಚವ್ವನ ಕಾಲನಿಯ ಮಂಜುನಾಥ ಸಂಜಯ ವಾಗ್ಮೋಡೆ (18) ಮೃತಪಟ್ಟಿದ್ದಾರೆ.

ತಂದೆ-ತಾಯಿ ಕಳೆದುಕೊಂಡಿರುವ ಶಂಕರ ಚಿಕ್ಕಮ್ಮನ ಹತ್ತಿರ ವಾಸ ಮಾಡುತ್ತಿದ್ದ. ವಿದ್ಯಾರ್ಥಿ ಆಗಿರುವ ಮಂಜುನಾಥ ಸೇರಿ ಮೊದಲ ಬಾರಿ ಅಯ್ಯಪ್ಪಸ್ವಾಮಿ ಕನ್ಯಾ ಮಾಲೆ ಧರಿಸಿದ್ದರು.

ಡಿ. 23 ನಡೆದಿದ್ದ ಈ ಘಟನೆಯಲ್ಲಿ ಈಗಾಗಾಲೇ ನಾಲ್ವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ 1.30ಕ್ಕೆ ಶಂಕರ ಹಾಗೂ 10.15ಕ್ಕೆ ಮಂಜುನಾಥ ಮೃತಪಟ್ಟಿದ್ದಾರೆ. ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬಾಲಕ ವಿನಾಯಕ ಬಾರಕೇರ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕೆಎಂಸಿಆರ್‌ಐ ಮೂಲಗಳು ತಿಳಿಸಿವೆ.