ಚಿತ್ರದುರ್ಗ: ರಾಜಾಧಿರಾಜರೆಲ್ಲ ಹೋರಾಡಿದ ಕೋಟೆ ನಾಡು ಚಿತ್ರದುರ್ಗ ಕಾಡುಪ್ರಾಣಿಗಳ ಕಾದಾಟಕ್ಕೆ ಸಾಕ್ಷಿಯಾಯಿತು. ಕಾಡಿನಿಂದ ನಾಡಿಗೆ ಬಂದಿದ್ದ ಎರಡು ಚಿರತೆಗಳ ನಡುವೆ ನಡೆದ ಕಾಳಗದಲ್ಲಿ ಗಂಡು ಚಿರತೆ ಮೃತಪಟ್ಟಿದ್ದು, ಮತ್ತೊಂದು ಚಿರತೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಂಡೇರಿ ಕಾವಲ್ಕೆರೆ ಎಂಬಲ್ಲಿ ಚಿರತೆಗಳ ಈ ಕಾದಾಟ ನಡೆದಿದೆ. ಇದರಲ್ಲಿ ಇನ್ನೊಂದು ಚಿರತೆಯ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಗಂಡು ಚಿರತೆ ಮೃತಪಟ್ಟಿದೆ.
ಸುಮಾರು ನಾಲ್ಕು ವರ್ಷಗಳ ಪ್ರಾಯದ ಈ ಚಿರತೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಮತ್ತೊಂದು ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ವಸಂತ್ ಕುಮಾರ್ ನೇತೃತ್ವದಲ್ಲಿ ಈ ಹುಡುಕಾಟ ನಡೆಯುತ್ತಿದ್ದು, ಸ್ಥಳೀಯರು ಕೂಡ ಈ ಹುಡುಕಾಟಕ್ಕೆ ಸಾಥ್ ನೀಡುತ್ತಿದ್ದಾರೆ. ಚಿರತೆಯ ಹುಡುಕಾಟಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.