ಜಿಲ್ಲೆ

ಜಿಲ್ಲೆಯಲ್ಲಿ ಕರೊನಾಗೆ ಇಬ್ಬರು ಬಲಿ

Haveri

ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಕರೊನಾ ಸ್ಪೋಟಗೊಂಡಿದ್ದು, ಒಂದೇ ದಿನ 49 ಜನರಿಗೆ ಸೋಂಕು ದೃಢಪಟ್ಟು, ಇಬ್ಬರು ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ತಾಲೂಕಿನ ಆಲದಕಟ್ಟಿ ಗ್ರಾಮದ 60 ವರ್ಷದ ವೃದ್ಧೆ ಹಾಗೂ ಶಿಗ್ಗಾಂವಿ ಪಟ್ಟಣದ ದೇಸಾಯಿ ಓಣಿಯ 75 ವರ್ಷದ ವೃದ್ಧೆ ಮೃತಪಟ್ಟವರು.

ಕಂಟೇನ್ಮೆಂಟ್ ಜೋನ್​ನಲ್ಲಿದ್ದ ಶಿಗ್ಗಾಂವಿಯ ವೃದ್ಧೆಗೆ ಕರೊನಾ ಸೋಂಕಿನ ಲಕ್ಷಣ ಕಂಡ ಬಂದ ಹಿನ್ನೆಲೆಯಲ್ಲಿ ಜೂ. 20ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿತ್ತು. ಆಲದಕಟ್ಟಿಯ ವೃದ್ಧೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ. 24ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಜೂ. 28ರಂದು ಆಕೆಗೆ ಸೋಂಕು ಇರುವುದು ದೃಢಪಟ್ಟಿತ್ತು.

ಇಬ್ಬರಿಗೂ ಜಿಲ್ಲಾ ಕೋವಿಡ್-19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ರಕ್ತದೊತ್ತಡ ಹಾಗೂ ಉಸಿರಾಟದ ತೊಂದರೆ ಎದುರಾದ ಕಾರಣ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಮಂಗಳವಾರ ಶಿಗ್ಗಾಂವಿ ತಾಲೂಕಿನಲ್ಲಿ 27, ಹಿರೇಕೆರೂರ ತಾಲೂಕಿನಲ್ಲಿ 15, ಹಾನಗಲ್ಲ 4, ಸವಣೂರ, ಹಾವೇರಿ, ರಾಣೆಬೆನ್ನೂರ ತಾಲೂಕಿನಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ.

ಈವರೆಗೆ ಜಿಲ್ಲೆಯಲ್ಲಿ ಒಂದು ದಿನಕ್ಕೆ 12 ಜನರಿಗೆ ಸೋಂಕು ದೃಢಪಟ್ಟಿದ್ದು ಗರಿಷ್ಠವಾಗಿತ್ತು. ಆದರೆ, ಮಂಗಳವಾರ ಅರ್ಧಶತಕದ ಅಂಚಿಗೆ ತಲುಪಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿ 118ಕ್ಕೆ ಏರಿಕೆಯಾಗಿದೆ. ಈವರೆಗೆ 25 ಜನರು ಗುಣವಾಗಿದ್ದರೆ, 91 ಸಕ್ರಿಯ ಪ್ರಕರಣಗಳು ಉಳಿದಿವೆ.

ಶಿಗ್ಗಾಂವಿಯ 27 ಪ್ರಕರಣಗಳಲ್ಲಿ 6 ವರ್ಷದ ಬಾಲಕ, 20 ವರ್ಷದ ಯುವಕ, ಸೇರಿ 17 ಪುರುಷರು, 10 ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಐವರು ಪುರುಷರು ಬಿಹಾರದಿಂದ ಶಿಗ್ಗಾಂವಿ ಬಳಿಯ ಪಂಚವಟಿ ಹೋಟೆಲ್​ಗೆ ಕೆಲಸಕ್ಕೆ ಬಂದಿದ್ದರು.

ಹಿರೇಕೆರೂರ ತಾಲೂಕಿನ 15ಪ್ರಕರಣಗಳಲ್ಲಿ ಪುರಪುಂಡಿಕೊಪ್ಪದ 45ವರ್ಷದ ಮಹಿಳೆ, ಯಮ್ಮಿಗನೂರನ 45ವರ್ಷ ಆಶಾ ಕಾರ್ಯಕರ್ತೆ, ಸುತ್ತಕೋಟಿಯ 42ವರ್ಷದ ಆಶಾ ಕಾರ್ಯಕರ್ತೆ, ನೂಲಗೇರಿಯ 41ವರ್ಷದ ಮಹಿಳೆ, ಕೋಡದ 49ವರ್ಷದ ಆಶಾ ಕಾರ್ಯಕರ್ತೆ, ಗುಡ್ಡದಮಾದಾಪುರದ 40ವರ್ಷದ ಆಶಾ ಕಾರ್ಯಕರ್ತೆ, ಮೇದೂರಿನ 25ವರ್ಷದ ಮಹಿಳೆ, ಮಾಸೂರಿನ 34ವರ್ಷದ ಮಹಿಳೆ, ರಾಮತೀರ್ಥ ಗ್ರಾಮದ 27ವರ್ಷದ ಪುರುಷ, 25ವರ್ಷದ ಪುರುಷ, 21ವರ್ಷದ ಯುವಕ, 55ವರ್ಷದ ಪುರುಷ, 30ವರ್ಷದ ಪುರುಷ, 32ವರ್ಷದ ಪುರುಷ, ರಟ್ಟಿಹಳ್ಳಿಯ 49ವರ್ಷದ ಪುರುಷ ಖಾಸಗಿ ವೈದ್ಯರೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾನಗಲ್ಲ ತಾಲೂಕಿನ 4 ಪ್ರಕರಣಗಳಲ್ಲಿ ತಿಳವಳ್ಳಿ ಗ್ರಾಮದ 27 ವರ್ಷದ ಪುರುಷ, ಹಾನಗಲ್ಲ ಪಟ್ಟಣದ 37 ವರ್ಷದ ಆಶಾ ಕಾರ್ಯಕರ್ತೆ, ಕಮತಗೇರಿ ಓಣಿಯ 33 ವರ್ಷದ ಆಶಾ ಕಾರ್ಯಕರ್ತೆ, ಕಂಚಿನೆಗಳೂರನ 24 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಸವಣೂರ ತಾಲೂಕಿನ ಹುರಳಿಕೊಪ್ಪಿ ಗ್ರಾಮದ 25 ವರ್ಷದ ಪುರುಷ, ಹಾವೇರಿ ತಾಲೂಕಿನ ಗುತ್ತಲದ 43 ವರ್ಷದ ಪುರುಷ, ರಾಣೆಬೆನ್ನೂರ ತಾಲೂಕಿನ ಹಲಗೇರಿಯ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ವೃದ್ಧೆಯ ಅಂತ್ಯ ಸಂಸ್ಕಾರಕ್ಕೂ ಕುಟುಂಬದವರಿಲ್ಲ: ಕರೊನಾ ಸೋಂಕು ಹಾಗೂ ತೀವ್ರ ರಕ್ತದೊತ್ತಡ, ನಿಮೋನಿಯಾದಿಂದ ಬಳಲಿ ಮಂಗಳವಾರ ಮೃತಪಟ್ಟ ಶಿಗ್ಗಾಂವಿಯ 75 ವರ್ಷದ ವೃದ್ಧೆಯ ಮನೆಯಲ್ಲಿರುವವರಿಗೂ ಸೋಂಕು ಈಗಾಗಲೇ ದೃಢಪಟ್ಟಿದ್ದು, ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮೃತದೇಹವನ್ನು ಒಯ್ಯಲು ಸಂಬಂಧಿಕರಿಗಾಗಿ ಬೆಳಗ್ಗೆಯಿಂದ ಜಿಲ್ಲಾಡಳಿತ ಕಾಯ್ದು ನೋಡಿತ್ತು. ಆದರೆ, ವೃದ್ಧೆಯ ಕುಟುಂಬದವರು ಸೋಂಕಿತರಾಗಿರುವುದರಿಂದ ಜಿಲ್ಲಾಡಳಿತವೇ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲು ಸಂಜೆ ನಿರ್ಧಾರ ಕೈಗೊಂಡಿದೆ.