ಜಿಲ್ಲೆ

ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸಾವು

ಎನ್.ವೆಂಕಟೇಶ್

ಮತ್ತಿಬ್ಬರ ಸ್ಥಿತಿ ಗಂಭೀರ

ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿ ತಿಪ್ಪಗಾನಹಳ್ಳಿ ಬಳಿ ಭಾನುವಾರ ಗೌರಿಬಿದನೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾರುತಿ ಸ್ವಿಫ್ಟ್​ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಹೆಬ್ಬಾಳ ನಿವಾಸಿಗಳಾದ ಸುದರ್ಶನ್​ (40), ಮಹಮ್ಮದ್​ ರಾಜಿಕ್​(28) ಮೃತರು. ಕುಡುಮಲಕುಂಟೆ ಬಳಿಯ ಜಮೀನಿನಲ್ಲಿ ಶೆಡ್​ ಕಾಮಗಾರಿ ಕೆಲಸ ಮುಗಿಸಿ, ಮೂವರು ಸ್ನೇಹಿತರೊಂದಿಗೆ ಬೆಂಗಳೂರಿಗೆ ವಾಪಸ್​ ಬರಬೇಕಾದರೆ ನಾಯಿ ಅಡ್ಡ ಬಂದ ಕಾರಣ ವೇಗವಾಗಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ, ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದಿಲ್​ ಪಾಷಾ ಮತ್ತು ರಾಜು ಸ್ಥಿತಿ ಗಂಭೀರವಾಗಿದೆ. ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತ ಸುದರ್ಶನ್​ ತಂದೆ ಸಂಗಪ್ಪ ಮಂಚೇನಹಳ್ಳಿ ಪೊಲೀಸ್​ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.