ಜಿಲ್ಲೆ

ವ್ಯಾನ್‌ಗೆ ಬಸ್ ಡಿಕ್ಕಿಯಾಗಿ ಇಬ್ಬರು ಸಾವು

ಕಿರಣ್ ಗೌಡ.ಜಿ

 ಕೊಳ್ಳೇಗಾಲ: ತಿಥಿ ಕಾರ್ಯ ಮುಗಿಸಿ ಟಾಟಾ ಏಸ್ ವಾಹನದಲ್ಲಿ ಹಿಂದಿರುಗುವಾಗ ಸಿದ್ದಯ್ಯನಪುರ ಬಳಿ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಟಾಟಾ ಏಸ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಉಳಿದ 11 ಜನರು ಗಾಯಗೊಂಡಿದ್ದಾರೆ.

ಬಾಣೂರು ಗ್ರಾಮದ ರಾಜಮ್ಮ (53), ಶ್ರುತಿ (30) ಮೃತರು. ಹರ್ಷಿತಾ(11), ಸಣ್ಣಮ್ಮ(45), ಮಹದೇವ (63), ರತ್ನಮ್ಮ(50), ಮಲ್ಲಣ್ಣ(57), ಲಿಂಗರಾಜು(55), ಸುಧಾ(47), ರಮೇಶ(50) ಮಾದೇಶ(58), ಲಿಂಗರಾಜು(46) ಟಾಟಾ ಏಸ್ ಚಾಲಕ ಗೌತಮ್ (24) ಹಾಗೂ ಬೈಕ್ ಸವಾರ ಪ್ರಕಾಶ್ (43) ಗಾಯಗೊಂಡಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದ ನಿವಾಸಿ ಶಾಂತರಾಜು ಎಂಬುವರ ಪತ್ನಿ ಆಶಾ(35) ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ 11ನೇ ದಿನದ ತಿಥಿ ಕಾರ್ಯಕ್ಕೆ ಮೃತಳ ತಾಯಿ ರಾಜಮ್ಮ, ತಂಗಿ ಶ್ರುತಿ, ಮಗಳಾದ ಹರ್ಷಿತಾ, ಸಂಬಂಧಿಕರು ಕೊಳ್ಳೇಗಾಲಕ್ಕೆ ಬಾಣೂರಿನಿಂದ ಟಾಟಾ ಏಸ್‌ನಲ್ಲಿ ಬಂದಿದ್ದರು. ಕಾರ್ಯ ಮುಗಿಸಿ ಊರಿನ ಕಡೆಗೆ ಸಿದ್ದಯ್ಯನಪುರ ಬಳಿ ತೆರಳುವಾಗ ಮಲೆ ಮಹದೇಶ್ವರಬೆಟ್ಟದ ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದೆ.

ಅಪಘಾತ ತೀವ್ರತೆಗೆ ಸ್ಥಳದಲ್ಲಿಯೇ ರಾಜಮ್ಮ ಅಸುನೀಗಿದ್ದಾರೆ. ಶ್ರುತಿ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಅಪಘಾತದಲ್ಲಿ ಸಿಲುಕಿದ್ದು ಸವಾರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ದುರಂತದಿಂದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವಮಾದಯ್ಯ, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಭೇಟಿ ನೀಡಿ ಪರಿಶೀಲಿಸಿದರು.

ಎಸ್ಪಿ ಡಾ.ಕವಿತಾ ಪ್ರತಿಕ್ರಿಯಿಸಿ, ಸಂಚಾರ ನಿಯಮ ಸರಿಯಾಗಿ ಪಾಲಿಸದಿರುವುದು ದುರಂತಕ್ಕೆ ಕಾರಣವಾಗಿದೆ. ಶಿವರಾತ್ರಿ ದಿನದಲ್ಲೂ ಟಿಪ್ಪರ್ ಹಾಗೂ ಕಾರಿನ ನಡುವೆ ಅಪಘಾತವಾಗಿ 5 ಮಂದಿ ಯುವಕರು ಮೃತಪಟ್ಟಿದ್ದರು. ವಾಹನ ಚಾಲಕರು ಕಟ್ಟುನಿಟ್ಟಾಗಿ ಸಂಚಾರ ನಿಯಮವನ್ನು ಪಾಲಿಸಬೇಕು ಎಂದರು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.