ಶಿವಮೊಗ್ಗ: ಸಾಗರ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ಬೈಕ್ ಹರಿದು ಫುಟ್‌ಪಾತ್‌ನ ಗುಡಿಸಲಿನಲ್ಲಿ ಮಲಗಿದ್ದ ಮಹಿಳೆ ಮತ್ತು ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಕಾಮೇಶ್ವರಿ(45) ಮತ್ತು ಬೈಕ್ ಹಿಂಬದಿ ಸವಾರ ಸೊರಬದ ಆಕಾಶ್(25) ಮೃತರು.
ನಗರದ ಬಾರ್‌ವೊಂದರಲ್ಲಿ ಸುದರ್ಶನ್, ಆಕಾಶ್ ಸೇರಿ ಮೂವರು ಕೆಲಸ ಮಾಡಿಕೊಂಡಿದ್ದು, ಬೆಳಗಿನಜಾವ ಒಂದೇ ಬೈಕ್‌ನಲ್ಲಿ ಮೂವರು ಸಾಗರ ರಸ್ತೆಯಲ್ಲಿ ತೆರಳುವಾಗ ಫುಟ್‌ಪಾತ್‌ನಲ್ಲಿದ್ದ ಗುಡಿಸಲಿಗೆ ನುಗ್ಗಿದೆ. ಈ ವೇಳೆ ಗುಡಿಸಲಲ್ಲಿ ಮಲಗಿದ್ದ ಕಾಮೇಶ್ವರಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಆಕೆಯ ಸಹೋದರಿ ಜ್ಯೋತಿ ಎಂಬುವರು ಗಾಯಗೊಂಡಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸುದರ್ಶನ್ ಕೂಡ ಗಾಯಗೊಂಡಿದ್ದಾನೆ.
ಆಂಧ್ರಪ್ರದೇಶದ ದುರ್ಗಾಪ್ರಸಾದ್ ಪತ್ನಿ ಮತ್ತು ಆಕೆ ಸಹೋದರಿ ಜತೆ ಫುಟ್‌ಪಾತ್ ಮೇಲೆ ಪ್ಲಾಸ್ಟಿಕ್ ವಸ್ತುಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಫುಟ್‌ಪಾತ್ ಪಕ್ಕದಲ್ಲೇ ಗುಡಿಸಲು ಹಾಕಿಕೊಂಡು ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದರು. ಆದರೆ ಬೆಳಗಿನ ಜಾವ ಬೈಕ್ ಜವರಾಯನಂತೆ ಗುಡಿಸಲಿಗೆ ನುಗ್ಗಿದೆ.
ದುರ್ಗಾಪ್ರಸಾದ್ ಅವರು ಮೂತ್ರ ವಿಸರ್ಜನೆಗೆಂದು ಹೊರಗೆ ತೆರಳಿದ್ದ ವೇಳೆ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಪ್ರಾಯಾಣಾಯದಿಂದ ಪಾರಾಗಿದ್ದಾರೆ. ಎಎಸ್‌ಪಿ ಎ.ಜಿ.ಕಾರಿಯಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.