ಜಿಲ್ಲೆ

2 ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ

ಗಂಗಾಧರ ಬಿ ವಿ

52 ಕೋಟಿ ರೂ ವೆಚ್ಚದಲ್ಲಿ ರಾಮನಗರ-ಚನ್ನಪಟ್ಟಣ ನಿಲ್ದಾಣ ಅಭಿವೃದ್ಧಿ

* ಅಮೃತ್ ಭಾರತ್ ಯೋಜನೆಯಡಿ ಕಾಮಗಾರಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಕೇಂದ್ರ ಸರ್ಕಾರ ದೇಶದ ವಿವಿಧ ರೈಲು ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿದ್ದು, ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಉನ್ನತೀಕರಣ ಇನ್ನೊಂದುವರೆ ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ನೀಡುವ ಕೆಲಸ ಪ್ರಗತಿಯಲ್ಲಿದೆ. ಸುಮಾರು 52 ಕೋಟಿ ರೂ, ವೆಚ್ಚದ ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು.

ಇದೀಗ ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ರೈಲು ನಿಲ್ದಾಣಗಳ ಉನ್ನತೀಕರಣ ವಿಚಾರವಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದರ ಜತೆಗೆ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ಕೂ ಮನವಿ ಮಾಡಿದ್ದಾರೆ.

ಬೊಂಬೆನಾಡಿನ ಹೈಟೆಕ್ ನಿಲ್ದಾಣ!

ಕಲ್ಲಿದ್ದಲು ಚಾಲಿತ ರೈಲಿನ ಕಾಲದಲ್ಲೇ ಅಂದರೆ 1881ರಲ್ಲಿ ಆರಂಭವಾದ ಚನ್ನಪಟ್ಟಣ ರೈಲು ನಿಲ್ದಾಣ ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಆಧುನಿಕತೆಗೆ ತಕ್ಕಂತೆ ಈ ನಿಲ್ದಾಣ ಅಂದಿನಿಂದ ಇಂದಿನವರೆಗೆ ಕಾಯಕಲ್ಪ ಕಂಡಿದೆಯಾದರೂ, 143 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಅಭಿವೃದ್ಧಿ ಕಾಣುತ್ತಿದೆ. ಈ ರೈಲು ನಿಲ್ದಾಣವು ಮಾರ್ಗದ 17 ರೈಲ್ವೆ ಶಾಖೆಗಳ ಕೇಂದ್ರ ಸ್ಥಾನವಾಗಿದೆ. ಜತೆಗೆ, ಪ್ರತಿನಿತ್ಯ ಬೆಂಗಳೂರು ಮತ್ತು ತುಮಕೂರು ಜಂಕ್ಷನ್‌ವರೆಗೆ (ಎರಡೂ ಮಾರ್ಗದಲ್ಲಿ) ಹಲವು ರೈಲುಗಳು ಸಂಚಾರ ಮಾಡುತ್ತಿವೆ. ತಾಲೂಕಿನ ಸಾವಿರಾರು ಮಂದಿ ತಮ್ಮ ವಿವಿಧ ಕಾರ್ಯಗಳಿಗೆ ತೆರಳಲು ಈ ನಿಲ್ದಾಣವನ್ನು ನೆಚ್ಚಿಕೊಂಡಿದ್ದಾರೆ. ಇದೀಗ, ನಿಲ್ದಾಣವನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿ ಮಾಡುವ ಕಾಮಗಾರಿ ಚಾಲನೆಯಲ್ಲಿ ಇದೆ.

ರೇಷ್ಮೆನಗರಿಯ ನಿಲ್ದಾಣಕ್ಕೂ ಕಾಯಕಲ್ಪ!

ಸಾಕಷ್ಟು ಇತಿಹಾಸ ಹೊಂದಿರುವ ಜಿಲ್ಲಾಕೇಂದ್ರ ರಾಮನಗರದ ರೈಲ್ವೆ ನಿಲ್ದಾಣವೂ ಈ ಯೋಜನೆಯಡಿಯಲ್ಲಿ ಕಾಯಕಲ್ಪ ಕಾಣುತ್ತಿದೆ. ಹಲವು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಈ ನಿಲ್ದಾಣವೂ ಅಭಿವೃದ್ಧಿ ಕಾಣಲಿದೆ. ಪ್ರತಿನಿತ್ಯ ಸಾವಿರಾರು ಮಂದಿ ಬಂದುಹೋಗುವ ರಾಮನಗರ ಮತ್ತು ಚನ್ನಪಟ್ಟಣ ರೈಲ್ವೆ ನಿಲ್ದಾಣಗಳು ನಿರ್ವಹಣೆ ಕೊರತೆ ಸೇರಿ ಹಲವು ಕಾರಣಗಳಿಂದ ಅವ್ಯವಸ್ಥೆಯ ಆಗರವಾಗಿದ್ದವು. ಹಲವು ವರ್ಷಗಳಿಂದ ಈ ನಿಲ್ದಾಣಗಳಲ್ಲಿ ಭದ್ರತೆ, ಸ್ವಚ್ಛತಾ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತಿದ್ದವು. ಈ ಎರಡು ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ಸಿಗುತ್ತಿರುವುದು, ರೈಲ್ವೆ ಬಳಕೆದಾರರ ಸಂತಸಕ್ಕೆ ಕಾರಣವಾಗಿದೆ.

ಹೇಗಿರಲಿದೆ ಹೊಸ ನಿಲ್ದಾಣ?

ರೈಲು ನಿಲ್ದಾಣಗಳ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಹೈಟೆಕ್ ಪ್ಲಾಟ್ ಫಾರ್ಮ್, ಶೌಚಗೃಹ, ಕಾಯುವ ಕೊಠಡಿ, ವಿಶ್ರಾಂತಿ ಗೃಹ, ಕಾರಿಡಾರ್ ನಿರ್ಮಾಣ, ವಾಹನ ಪಾರ್ಕಿಂಗ್, ಮೇಲ್ಸೆತುವೆ, ಟಿಕೆಟ್ ಕೌಂಟರ್‌ಗಳು, ಲಿಫ್ಟ್ ಹೀಗೆ ಎಲ್ಲ ರೀತಿಯ ಸವಲತ್ತುಗಳು ಈ ಹೈಟೆಕ್ ನಿಲ್ದಾಣದಲ್ಲಿ ಇರಲಿವೆ. ಇದರೊಂದಿಗೆ, ಅಂಗವಿಕಲರ ಸ್ನೇಹಿಯಾಗಿಯೂ ಈ ನಿಲ್ದಾಣಗಳು ಅಭಿವೃದ್ಧಿಯಾಗಲಿವೆೆ. ಪ್ಲಾಟ್‌ಾರ್ಮ್‌ಗಳಲ್ಲಿ ನೆರಳು ಹಾಗೂ ಬೆಳಕಿನ ವ್ಯವಸ್ಥೆ, ಮಾಹಿತಿ ಫಲಕಗಳ ಅಳವಡಿಕೆ. ಎಕ್ಸಲೇಟರ್ ಮತ್ತು ಲಿಫ್ಟ್ ಸೌಲಭ್ಯಗಳು ಲಭ್ಯವಾಗಲಿದೆ. ಪ್ರಸ್ತುತ 3 ಮೀಟರ್ ಇರುವ ಮೇಲ್ಸೇತುವೆ ಜತೆಗೆ, 12 ಮೀಟರ್ ಅಗಲದ ಮೇಲ್ಸೇತುವೆ ನಿರ್ಮಾಣವಾಗಲಿದೆ.

ಬ್ರಿಟಿಷ್ ಸರ್ಕಾರ ವ್ಯಾಪಾರ ಮತ್ತು ತುರ್ತು ಸಂದರ್ಭದಲ್ಲಿ ನೆರವಿನ ವಸ್ತುಗಳನ್ನು ಸಾಗಿಸಲು ರೈಲ್ವೆ ಮಾರ್ಗಗಳನ್ನು ರಚಿಸುವ ಸಿದ್ಧತೆ ಮಾಡಿಕೊಂಡಿತ್ತು. ಇದಕ್ಕಾಗಿ ಬೆಂಗಳೂರಿನ ಕಂಟೋನ್ಮೆಂಟ್ - ತಮಿಳುನಾಡಿನ ಜೋಲಾರ್ ಪೇಟೆ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಇದರ ನಡುವೆಯೇ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಬೆಂಗಳೂರಿನಿಂದ ಮೈಸೂರಿಗೆ ಮೊದಲ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದರ ಮೊದಲ ಹಂತದಲ್ಲಿ ಬೆಂಗಳೂರು ಚನ್ನಪಟ್ಟಣವರೆಗೆ 1881ರಲ್ಲಿ ಕೆಲಸ ಪೂರ್ಣಗೊಂಡಿತು. ಎರಡನೇ ಹಂತದಲ್ಲಿ ಚನ್ನಪಟ್ಟಣದಿಂದ ಮೈಸೂರುವರೆಗೂ ರೈಲು ಮಾರ್ಗ 1882ರ ಫೆಬ್ರವರಿಯಲ್ಲಿ ಪೂರ್ಣಗೊಂಡಿತು. ಅಂದು ಬೆಂಗಳೂರು - ಮೈಸೂರು ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ತಗುಲಿದ ವೆಚ್ಚ 38.32 ಲಕ್ಷ ರೂ. ಮಾತ್ರ.

ಬಿಡದಿ ನಿಲ್ದಾಣ ಉನ್ನತೀಕರಣಕ್ಕೆ ಮನವಿ

ವಿಶ್ವ ಭೂಪಟದಲ್ಲಿ ಕೈಗಾರಿಕೆಯಿಂದಲೇ ಸ್ಥಾನ ಪಡೆದುಕೊಂಡಿರುವ ಬಿಡದಿ ರೈಲು ನಿಲ್ದಾಣವನ್ನು ಉನ್ನತೀಕರಣ ಮಾಡುವಂತೆ ಡಾ.ಸಿ.ಎನ್.ಮಂಜುನಾಥ್ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ಈ ರೈಲು ನಿಲ್ದಾಣ ಪ್ರಯಾಣಿಕ ಸ್ನೇಹಿಯಾಗಿ ಇಲ್ಲ. ಈ ಹಿನ್ನೆಲೆಯಲ್ಲಿ ರಾಮನಗರ, ಚನ್ನಪಟ್ಟಣ ರೈಲು ನಿಲ್ದಾಣದಂತೆಯೇ ಇದಕ್ಕೂ ಆಧುನಿಕ ಸ್ಪರ್ಶ ನೀಡುವಂತೆ ಸಂಸದರು ಮನವಿ ಮಾಡಿದ್ದಾರೆ. ಹಿಂದಿನಿಂದಲೂ ಒಡೆಯರ್ ಎಕ್ಸ್‌ಪ್ರೆಸ್ ರೈಲನ್ನು ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಿಲುಗಡೆ ಮಾಡುವಂತೆ ಮಾಡುತ್ತಲೇ ಬರಲಾಗುತ್ತಿದೆ. ಈ ಬಾರಿಯೂ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

ಓವರ್ ಬ್ರಿಡ್ಜ್‌ಗೆ ಅನುಮತಿ

ಚನ್ನಪಟ್ಟಣ ತಾಲೂಕು ಬೈರಾಪಟ್ಟಣ ಬಳಿಯ ರೈಲ್ವೆ ಲೆವಲ್ ಕ್ರಾಸಿಂಗ್ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಅನುಮಿತಿ ಕೊಟ್ಟಿದೆ ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. ಚನ್ನಪಟ್ಟಣ - ಕೆಸ್ತೂರು - ಹುಲಿಯೂರು ದುರ್ಗ- ಕುಣಿಗಲ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಬೈರಾಪಟ್ಟಣ ಬಳಿ ಮೇಲ್ಸೇತುವೆ ಇಲ್ಲದ ಕಾರಣ, ರೈಲು ಹಾದು ಹೋದ ನಂತರವೇ ಇತರ ವಾಹನ ಸವಾರರು ಹಳಿ ದಾಟಬೇಕಿತ್ತು. ಈ ಹಿನ್ನೆಲೆಯಲ್ಲಿ ಅನುಮತಿಗಾಗಿ ಕೋರಲಾಗಿತ್ತು, ಇಲ್ಲಿ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದರು.

cn manjunath

ರಾಮನಗರ - ಚನ್ನಪಟ್ಟಣ ರೈಲು ನಿಲ್ದಾಣಗಳ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿದೆ. ಈ ಸಂಬಂಧ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ. ಬಿಡದಿ ರೈಲು ನಿಲ್ದಾಣದ ಆಧುನೀಕರಣಕ್ಕೂ ಸಚಿವರಲ್ಲಿ ಮನವಿ ಮಾಡಲಾಗಿದೆ. ಡಾ.ಸಿ.ಎನ್.ಮಂಜುನಾಥ್, ಸಂಸದರು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ