ಬೆಂಗಳೂರು: ನಿಷೇಧಿತ ಒಂದು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸಂಗ್ರಹಿಸಿ, ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಸಲ್ಮಾನ್ ಮತ್ತು ರೆಹಮತ್‌ನಗರದ ಅಮ್ಜದ್ ಬಂಧಿತರು. ಆರೋಪಿಗಳಿಂದ 80 ಲಕ್ಷ ರೂ. ಮೌಲ್ಯದ ಒಂದು ಸಾವಿರ ರೂ. ಮುಖಬೆಲೆಯ ನಿಷೇಧಿತ ನೋಟುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಜೆ.ಸಿ.ನಗರ ಉಪವಿಭಾಗದ ಎಸಿಪಿ ರೀನಾ ಸುವರ್ಣ ತಿಳಿಸಿದ್ದಾರೆ.
ಪರಮೇಶ್ವರಿನಗರದ ನಿವಾಸಿ ಉದ್ಯಮಿ ವಿನೋದ್ ಶರ್ಮಾ ಎಂಬುವರಿಗೆ ಆರು ತಿಂಗಳ ಹಿಂದೆ ಸಲ್ಮಾನ್ ಪರಿಚಯವಾಗಿದ್ದ. ಉದ್ಯಮಿಯನ್ನು ಆಗಾಗ ಭೇಟಿಯಾಗುತ್ತಿದ್ದ ಆರೋಪಿ, 1 ಕೋಟಿ ರೂ. ನಿಷೇಧಿತ ಹಳೇ ನೋಟುಗಳಿವೆ. ನೇಪಾಳದಲ್ಲಿ ಈಗಲೂ ಚಲಾವಣೆಯಲ್ಲಿವೆ. ಕಡಿಮೆ ಬೆಲೆಗೆ ತೆಗೆದುಕೊಂಡು ಎನ್‌ಆರ್‌ಐಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆಮಿಷ ಒಡ್ಡಿದ್ದ.
ರೆಹಮತ್‌ನಗರದಲ್ಲಿರುವ ಅಮ್ಜದ್ ಮನೆಗೆ ಕರೆದೊಯ್ದು 3 ಬ್ಯಾಗ್‌ಗಳಲ್ಲಿದ್ದ 1000 ರೂ. ಮುಖಬೆಲೆಯ ನೋಟುಗಳನ್ನು ತೋರಿಸಿದ್ದ. ನಿಷೇಧಿತ ನೋಟುಗಳನ್ನು ಸಂಗ್ರಹಿಸುವುದು ಕಾನೂನು ಬಾಹಿರ ಎಂಬುದು ವಿನೋದ್ ಶರ್ಮಾ ಅವರಿಗೆ ಗೊತ್ತಿತ್ತು. ಈ ಬಗ್ಗೆ ಅವರು ಕೊಟ್ಟ ದೂರಿನ ಮೇರೆಗೆ ಅಮ್ಜದ್ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ ನಿಷೇಧಿತ ಹಳೇ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.