ಜಿಲ್ಲೆ

ದಸರಾ ರಜೆಗೆ ಅಜ್ಜಿ ಮನೆಗೆ ಬಂದ ಮೊಮ್ಮಕ್ಕಳಿಬ್ಬರು ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ದುರಂತ ಸಾವು! Dasara Holidays

Dasara Holidays : ದಸರಾ ರಜೆಗೆ ಅಜ್ಜಿ ಮನೆಗೆ ಬಂದಿದ್ದ ಮೊಮ್ಮಕ್ಕಳಿಬ್ಬರು ಕೃಷಿ ಹೊಂಡಕ್ಕೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ತಾಲೂಕಿನಲ್ಲಿ ನಡೆದಿದೆ.

ಹನೂರು ತಾಲೂಕಿನ ಕುರುಬದೊಡ್ಡಿ ಗ್ರಾಮದಲ್ಲಿರುವ ಅಜ್ಜಿ‌ ಮನೆಗೆ ಬಂದಿದ್ದ‌ ಆರ್.ಎಸ್ ದೊಡ್ಡಿಯ ನಿವಾಸಿ ಕುಮಾರಸ್ವಾಮಿ ಪುತ್ರರಾದ ಸಂಜಯ್(4) ಮತ್ತು ಯೋಗೇಶ್(9) ಮೃತರು.

ಇಬ್ಬರು ಬಾಲಕರು ಆಟವಾಡಲು ಜಮೀನಿಗೆ ಹೋಗಿದ್ದರು. ಈ ವೇಳೆ ನೀರು ತುಂಬಿದ ಕೃಷಿ ಹೊಂಡ ಬಳಿ ತೆರಳಿದಾಗ ಆಯಾತಪ್ಪಿ ಒಳಗೆ ಬಿದ್ದು ಮೃತಪಟ್ಟಿದ್ದಾರೆ.

ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ಪಾಲಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಇದೀಗ ದುಃಖ ಆವರಿಸಿಕೊಂಡಿದೆ.

ಮುನ್ನೆಚ್ಚರಿಕೆ ಇರಲಿ

ರಜಾ ದಿನಗಳಲ್ಲಿ ಮಕ್ಕಳು ಜಮೀನಿನಲ್ಲಿ ಆಟವಾಡುವಾಗ ಕೃಷಿ ಹೊಂಡಗಳು ಮಾರಕವಾಗಿ ಪರಿಣಮಿಸಬಹುದು. ಹೀಗಾಗಿ ಅವರ ಸುರಕ್ಷತೆಗಾಗಿ ಕೆಲವು ಸಲಹೆಗಳನ್ನು ಅನುಸರಿಸಬೇಕು. ಹೊಂಡದ ಬಳಿ ಅಥವಾ ನೀರಿನ ಬಳಿ ಮಕ್ಕಳನ್ನು ಆಟವಾಡಲು ಬಿಡಬಾರದು. ಅಪ್ಪ-ಅಮ್ಮ ಜತೆಯಲ್ಲೇ ಇರಬೇಕು. ಏಕೆಂದರೆ, ತುರ್ತು ಸಂದರ್ಭದಲ್ಲಿ ನೆರವಾಗುತ್ತದೆ. ಅಪ್ಪಿತಪ್ಪಿ ಹೊಂಡದ ಕಟ್ಟೆ ಅಥವಾ ಅಂಚಿನಲ್ಲಿ ನಡೆಯಲು ಬಿಡಬಾರದು ಏಕೆಂದರೆ, ಕಾಲು ಜಾರಿ ಅಥವಾ ಆಯತಪ್ಪಿ ಬೀಳಬಹುದು. ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಕೃಷಿ ಹೊಂಡವಿದ್ದರೆ ಯಾವುದೇ ಕಾರಣಕ್ಕೆ ಅವರನ್ನು ಹತ್ತಿರ ಬಿಡಬೇಡಿ. ಅಲ್ಲದೆ, ಮಕ್ಕಳ ಮೇಲೆ ನಿಮ್ಮ ಗಮನ ಸದಾ ಇರಲಿ.