ಜಿಲ್ಲೆ

ಎರಡು ಗಂಡಾನೆ ಪ್ರತ್ಯಕ್ಷ

Hassan

ಅರಕಲಗೂಡು: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಾಡಾನೆಗಳು ತಾಲೂಕಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದು ರೈತರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಹೇಮಾವತಿ ಹಿನ್ನೀರು ದಾಟಿ ಬಂದಿರುವ ಎರಡು ಗಂಡಾನೆಗಳು ತಾಲೂಕಿನ ನೆಲಬಳ್ಳಿ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಕಾಣಿಸಿಕೊಂ ಡಿವೆ. ಭತ್ತದ ಕಟಾವು ನಡೆಸುತ್ತಿದ್ದ ರೈತರು ಆನೆಗಳನ್ನು ನೋಡಿ ಜೀವ ಭಯದಿಂದ ಓಡಿದ್ದಾರೆ. ವಿಷಯ ತಿಳಿದು ಗುಂಪುಗೂಡಿದ ಜನರು ಗದ್ದಲ ಎಬ್ಬಿಸಿ ಆನೆಗಳನ್ನು ಓಡಿಸಿದ್ದಾರೆ.

ಅಲ್ಲಿಂದ ಹಿನ್ನೀರಿನ ಅಂಚಿನಲ್ಲೆ ಸಾಗಿಬಂದ ಆನೆಗಳು ಚಿಕ್ಕ ಅರಕಲಗೂಡು ಗ್ರಾಮದ ಹೊರವಲಯದಲ್ಲಿ ಸ್ವಾಮಿಗೌಡ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ರಾಗಿ ಮತ್ತು ಹಸಿ ಮೆಣಸಿನಕಾಯಿ ಬೆಳೆಗಳನ್ನು ಹಾಗೂ ನೀರು ಸರಬರಾಜು ಪೈಪ್‌ಗಳನ್ನು ತುಳಿದು ಹಾಳು ಮಾಡಿದ್ದು ಸಮೀಪದ ಖಾಸಗಿಯವರ ನೀಲಗಿರಿ ತೋಪಿನಲ್ಲಿ ಬೀಡು ಬಿಟ್ಟಿವೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಆನೆಗಳನ್ನು ಕಾಡಿಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ನಷ್ಟಕ್ಕೊಳ ಗಾದ ರೈತರಿಗೆ ಪರಿಹಾರ ನೀಡುವುದಾಗಿ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಕಾಡಾನೆಗಳು ಪದೇ ಪದೆ ಬೆಳೆ ನಷ್ಟ ಮಾಡುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ಆನೆಗಳನ್ನು ಕಾಡಿಗಟ್ಟುವ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ.

ಹಗಲು ರಾತ್ರಿ ಎನ್ನದೇ ಆನೆಗಳು ಅಡ್ಡಾಡುತ್ತಿದ್ದು ಜೀವ ಭಯದಿಂದ ದಿನದೂಡುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಳೇ ಮೊಕ್ಕಾಂ ಹೂಡಿದ್ದು ಆನೆಗಳನ್ನು ಕಾಡಿಗಟ್ಟಲು ಹರ ಸಾಹಸ ಮಾಡುತ್ತಿದ್ದಾರೆ.