ಮೂಡಿಗೆರೆ: ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದೆ. ಸೋಮವಾರ ಬೇಲೂರು ಭಾಗದಿಂದ ಗೋಣಿಬೀಡು ಹೋಬಳಿಯ ಗ್ರಾಮಗಳಿಗೆ ಲಗ್ಗೆಯಿಟ್ಟಿದ್ದ 16 ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಾಪಸ್ ಅಟ್ಟಲು ಹರಸಾಹಸ ಪಡುತ್ತಿರುವಾಗಲೆ ಬಡವನದಿಣ್ಣೆ ಹಾಗೂ ಬಿದರಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಕಾಫಿ ತೋಟವನ್ನು ಧ್ವಂಸಗೊಳಿಸಿವೆ.
3 ತಿಂಗಳ ಹಿಂದೆ ಬೇಲೂರು ಭಾಗದಿಂದ ತಾಲೂಕಿಗೆ ಬಂದಿದ್ದ 3 ಕಾಡಾನೆ ಪೈಕಿ ಬೇರ್ಪಟ್ಟ ಒಂಟಿ ಕಾಡಾನೆ ಬಡವನದಿಣ್ಣೆ, ಕಿತ್ತಲೆಗಂಡಿ, ಹಾಲೂರು, ಅಣಜೂರು, ಬೆಟ್ಟದಮನೆ, ಜಿ.ಹೊಸಹಳ್ಳಿ ಗ್ರಾಮದ ಮೂಲಕ ಬೇಲೂರು ತಾಲೂಕಿಗೆ ಹಿಂದಿರುಗಿತ್ತು. ಉಳಿದಿದ್ದ ಎರಡು ಕಾಡಾನೆಗಳು ಪಟ್ಟಣಕ್ಕೆ ಹೊಂದಿಕೊಂಡಿರುವ ಲೋಕವಳ್ಳಿ ಮತ್ತು ಬಿದರಹಳ್ಳಿ ಗ್ರಾಮದವರೆಗೆ ಬಂದಿದ್ದವು. ಪಟ್ಟಣ ಪ್ರವೇಶಿಸದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಕಾಡಾನೆಗಳು ಹೆದ್ದಾರಿ ದಾಟುವ ಸಾಧ್ಯತೆ ಇದ್ದಿದ್ದರಿಂದ ಅಂದು ಕಡೂರು, ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸಂಜೆ 5 ರಿಂದ ರಾತ್ರಿ 10 ರವರೆಗೆ ವಾಹನ ಸಂಚಾರಕ್ಕೆ ಅಧಿಕಾರಿಗಳು ತಡೆಯೊಡ್ಡಿದ್ದರು. ರಾತ್ರಿ 2 ಕಾಡಾನೆಗಳನ್ನು ಸಾರಗೋಡು ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ತಂಡ ಯಶಸ್ವಿಯಾಗಿತ್ತು. ಆ ಎರಡೂ ಕಾಡಾನೆಗಳು 3 ತಿಂಗಳ ಬಳಿಕ ಶುಕ್ರವಾರ ಹಗಲಲ್ಲೇ ಬಡವನದಿಣ್ಣೆ ಗ್ರಾಮದ ಬಿ.ಆರ್.ಶಿವಕುಮಾರ್ ಎಂಬುವವರ ತೋಟದಲ್ಲಿ ಕಾಣಿಸಿಕೊಂಡಿದ್ದು ಕಾಫಿ ಗಿಡಗಳನ್ನು ಧ್ವಂಸಗೊಳಿಸಿವೆ. ಶುಕ್ರವಾರ ರಾತ್ರಿ ಬಿದರಹಳ್ಳಿ ಗ್ರಾಮದವರೆಗೂ ಬಂದಿದ್ದವು. ಪಟ್ಟಣದತ್ತ ಮುಸುಳಲು ಅರಣ್ಯ ಇಲಾಖೆ ತಂಡ ಅವಕಾಶ ನೀಡದೆ ರಾತ್ರಿ ಕಾರ್ಯಾಚರಣೆ ನಡೆಸಿ ತತ್ಕೊಳ ಮೀಸಲು ಅರಣ್ಯದತ್ತ ಅಟ್ಟಿದೆ. ಆದರೆ ಕಾಡಾನೆ ಹಾವಳಿಯಿಂದ ತಾಲೂಕಿನ ಜನ ತೀರ ಭಯಪಡುತ್ತಿದ್ದು ಯಾವ ಕ್ಷಣದಲ್ಲಿ ಎಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗುತ್ತವೆ ಎಂದು ತಿಳಿಯದೆ ಜನ ಕಂಗಾಲಾಗಿದ್ದಾರೆ.
ಕುಂದೂರು ಮೀಸಲು ಅರಣ್ಯದಲ್ಲಿದ್ದ ಎರಡು ಕಾಡಾನೆಗಳು ಶುಕ್ರವಾರ ಬಡವನದಿಣ್ಣೆ ಮತ್ತು ಬಿದರಹಳ್ಳಿ ಗ್ರಾಮಕ್ಕೆ ಬಂದಿದ್ದವು. ಕೆಲ ತೋಟದಲ್ಲಿ ಕಾಫಿ ಗಿಡಗಳಿಗೆ ಹಾನಿಯುಂಟು ಮಾಡಿರುವ ಮಾಹಿತಿ ಇದೆ. ಆ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ ದಾಟದಂತೆ ತಡೆಯೊಡ್ಡಿದ್ದೆವು. ಶನಿವಾರ ಬೆಳಗ್ಗೆ ತತ್ಕೊಳ ಮೀಸಲು ಅರಣ್ಯಕ್ಕೆ ಅಟ್ಟಲಾಗಿದೆ. ಕಾಡಾನೆಗಳು ಮತ್ತೆ ಗ್ರಾಮದತ್ತ ಪ್ರವೇಶಿಸಿದಂತೆ ಎಚ್ಚರಿಕೆ ವಹಿಸಲಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬಗ್ಗೆ ನಿಗಾವಹಿಸಲಾಗಿದೆ. ಕೂಂಬಿಂಗ್ ಮುಂದುವರಿದಿದೆ ಎಂದು ಮೂಡಿಗೆರೆ ಆರ್‌ಎಫ್‌ಒ ಮೋಹನ್‌ಕುಮಾರ್ ತಿಳಿಸಿದ್ದಾರೆ.