ಜಿಲ್ಲೆ

ಎತ್ತು ಮೈ ತೊಳೆಯಲು ಹೋಗಿದ್ದ ಇಬ್ಬರು ರೈತರು ನೀರುಪಾಲು

ಹಾನಗಲ್ಲ: ಎತ್ತುಗಳ ಮೈತೊಳೆಯಲು ತೆರಳಿದ್ದ ಇಬ್ಬರು ರೈತರು ನೀರು ಪಾಲಾದ ಘಟನೆ ಹಾನಗಲ್ಲ ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಮಕರವಳ್ಳಿ ಗ್ರಾಮದ ನಾಗರಾಜ ಮಟ್ಟಿಮನಿ (50) ಹಾಗೂ ಮಾಲತೇಶ ದಾಸನವರ (61) ಮೃತಪಟ್ಟವರು. ಗ್ರಾಮದ ಪಕ್ಕದಲ್ಲಿರುವ ಕೆರೆಯಲ್ಲಿ ಎತ್ತುಗಳ ಮೈತೊಳೆಯಲು ತೆರಳಿದ್ದಾಗ ನಾಗರಾಜನ ಕೈಗೆ ಸುತ್ತಿದ್ದ ಹಗ್ಗವನ್ನು ಎತ್ತು ನೀರಿನಲ್ಲಿ ಎಳೆದೊಯ್ದಿದೆ. ಆಗ ಆತನನ್ನು ರಕ್ಷಿಸಲು ಮುಂದಾದ ಮಾಲತೇಶನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಹಾನಗಲ್ಲಿನ ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹಗಳ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಂಜೆ ಮಾಲತೇಶನ ಮೃತದೇಹ ಪತ್ತೆಯಾಗಿದ್ದು, ನಾಗರಾಜನ ಪತ್ತೆಗಾಗಿ ಕೆರೆಯಲ್ಲಿ ಶೋಧ ಕಾರ್ಯ ನಡೆದಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.