ಜಿಲ್ಲೆ

ಕರಡಿ ದಾಳಿಗೆ ಗಂಭೀರವಾಗಿ ಗಾಯಗೊಂಡ ಇಬ್ಬರು ರೈತರು

ಚಿಕ್ಕಬಳ್ಳಾಪುರ: ತಾಲೂಕಿನ ಗುರುಕುಲನಾಗೇನಹಳ್ಳಿಯಲ್ಲಿ ಕರಡಿ ದಾಳಿಗೆ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ ನರಸಿಂಹಪ್ಪ (೪೮) ಹಾಗೂ ಕೃಷ್ಣಪ್ಪ (೫೧) ಗಾಯಾಳು. ಇಬ್ಬರನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನರಸಿಂಹಪ್ಪ ಮುಖ, ತಲೆ, ಕಿವಿ, ಕಣ್ಣು ಸೇರಿದಂತೆ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ. ಕೃಷ್ಣಪ್ಪನ ಕೈಯನ್ನು ಕರಡಿ ಬಲವಾಗಿ ಕಚ್ಚಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

*ಪ್ರಕರಣದ ಹಿನ್ನೆಲೆ
ಗ್ರಾಮದ ಹೊರ ವಲಯದ ಟೊಮ್ಯಾಟೋ ತೋಟದಲ್ಲಿ ನರಸಿಂಹಪ್ಪ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಕರಡಿ ದಾಳಿ ಮಾರಣಾಂತಿಕ ಹಲ್ಲೆ ನಡೆಸಿದೆ. ಕೊನೆಗೆ ಗಾಯಾಳು ನೆಲಕ್ಕೆ ತಟಸ್ಥವಾಗಿದ್ದ ಬಿದ್ದ ಬಳಿಕ ಮತ್ತೊಂದು ತೋಟದಲ್ಲಿದ್ದ ಕೃಷ್ಣಪ್ಪ ಮೇಲೆ ಮುಗಿ ಬಿದ್ದಿದೆ. ತಕ್ಷಣ ಜೋರಾಗಿ ಕಿರುಚುತ್ತಿದ್ದಂತೆ ಸ್ಥಳೀಯರು ಮಾರಕಾಸ್ತ್ರಗಳೊಂದಿಗೆ ಓಡಿ ಬಂದಿದ್ದು ಕರಡಿ ಭಯದಲ್ಲಿ ತಕ್ಷಣ ನಾಪತ್ತೆಯಾಗಿದೆ.
ಗುರುಕುಲನಾಗೇನಹಳ್ಳಿ ಸುತ್ತಲು ಅರಣ್ಯ, ಗುಡ್ಡ ಪ್ರದೇಶವಿದ್ದು ಆಗಾಗ ಇಲ್ಲಿ ಚಿರತೆ, ಕರಡಿ, ಜಿಂಕೆಗಳು ಕಾಣಿಸಿಕೊಳ್ಳುತ್ತಿರುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.