ಅರಸೀಕೆರೆ: ಭಿಕ್ಷೆ ಕೇಳುವ ನೆಪದಲ್ಲಿ ಒಂಟಿ ಮನೆ ದರೋಡೆ ಮಾಡಲು ಬಂದಿದ್ದ ಇಬ್ಬರು ನಕಲಿ ಸ್ವಾಮೀಜಿ ಹಾಗೂ ಮೂವರು ಸಹಚರರನ್ನು ಕಣಕಟ್ಟೆ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮಸ್ಥರು ಸೆರೆ ಹಿಡಿದು ಬಾಣಾವರ ಠಾಣೆಗೆ ಒಪ್ಪಿಸಿದ್ದಾರೆ.
ಭಾನುವಾರ ಸಂಜೆ ಗ್ರಾಮಕ್ಕೆ ಕಾವಿಧಾರಿಗಳಾಗಿ ಬಂದಿದ್ದ ಆರೋಪಿಗಳು ದಾನಶೇಖರಪ್ಪ ಅವರ ಒಂಟಿ ಮನೆಗೆ ದಿಢೀರ್ ನುಗ್ಗಿದರು. ಜೇನುಕಲ್ ಸಿದ್ದೇಶ್ವರಸ್ವಾಮಿ ಮಠದವರು ಎಂದು ಹೇಳಿಕೊಂಡ ಅವರು, ಮಠದ ಅಭಿವೃದ್ಧಿಗೆ ಸಹಾಯ ಮಾಡಿ ಎಂದು ಬೇಡಿಕೆ ಇಟ್ಟರು. ಅನುಮಾನಗೊಂಡ ಮನೆಯ ಮಹಿಳೆ ಗ್ರಾಮದ ಮುಖಂಡರಿಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಿದರು. ಅಪಾಯದ ಸೂಚನೆ ಅರಿತ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಗ್ರಾಮಸ್ಥರಿಗೆ ಕಾರು ಸಹಿತ ಸಿಕ್ಕಿಬಿದ್ದರು.
ಸ್ವಾಮೀಜಿ ವೇಷದಲ್ಲಿ ಮೋಸ ಮಾಡಲು ಬಂದಿದ್ದ ಐವರಿಗೂ ಗೂಸಾ ನೀಡಿದ ಗ್ರಾಮಸ್ಥರು, ಬಾಣಾವರ ಠಾಣೆಗೆ ಒಪ್ಪಿಸಿದರು. ಇವರ ಬಳಿ ಲಕ್ಷಾಂತರ ರೂ. ಹಣವಿತ್ತು ಎನ್ನಲಾಗಿದೆ. ಕಾರಿನಲ್ಲಿ ಬಂದವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಿದ್ದರಹಟ್ಟಿ ಗ್ರಾಮದವರು ಎನ್ನಲಾಗಿದೆ. ಭಿಕ್ಷೆ ನೆಪದಲ್ಲಿ ಇವರು ಈ ಹಿಂದೆ ಕಲ್ಗುಂಡಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ ಪಿಸ್ತೂಲ್ ತೋರಿಸಿ ಹಣ ದೋಚಿ ಪರಾರಿಯಾಗಿದ್ದರು. ಇದೀಗ ನಗದು ಸಹಿತ ಸಿಕ್ಕಿ ಬಿದ್ದರೂ ಪೊಲೀಸರು ಇವರನ್ನು ಬಿಟ್ಟು ಕಳಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.