ಬೆಂಗಳೂರು: ವೈರಾಣು ಜ್ವರದ ಜತೆಗೆ ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ವರದಿಯಾಗುತ್ತಿದ್ದು, ದಾವಣಗೆರೆ ಮತ್ತು ಧಾರವಾಡದಲ್ಲಿ ತಲಾ ಒಬ್ಬರಂತೆ ಡೆಂಘೆ ಸೋಂಕಿನಿಂದ ಇಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಶನಿವಾರ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಡೆಂಘೆ ಶಂಕಿತ ಮರಣ ಪ್ರಕರಣಗಳು ವರದಿಯಾಗಿವೆ. ಆದರೆ ಈ ಪ್ರಕರಣಗಳ ಸಾವಿನ ಲೆಕ್ಕಗಳ ವರದಿ (ಡೆತ್ ಆಡಿಟ್) ಸಿದ್ಧಗೊಂಡು, ಇಲಾಖೆಗೆ ಸಲ್ಲಿಕೆಯಾದ ಬಳಿಕವಷ್ಟೇ ಅಧಿಕೃತವಾಗಿ ೋಷಿಸಲಾಗುತ್ತದೆ. ಅದರಂತೆ ರಾಜ್ಯದಲ್ಲಿ ಈವರೆಗೂ ಡೆಂಘೆಗೆ 12 ಮಂದಿ ಬಲಿಯಾಗಿದ್ದಾರೆ.
ಶನಿವಾರ ಹೊಸದಾಗಿ 196 ಡೆಂಘೆ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,229 ತಲುಪಿದೆ. ಸೋಂಕಿತರಲ್ಲಿ 206 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಗೆ ಒಳಗಾಗಿದ್ದಾರೆ. ಡೆಂಘೆ ಪ್ರಕರಣಗಳ ಪತ್ತೆಗಾಗಿ ರಾಜ್ಯದಲ್ಲಿ ಈವರೆಗೂ 1.65 ಲಕ್ಷ ಶಂಕಿತರ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, 23,526 ಪ್ರಕರಣಗಳು ದೃಢಪಟ್ಟಿವೆ.