ರಾಣೆಬೆನ್ನೂರ: ನಾಮಕರಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ನಿಂದ ಬಿದ್ದು ಇಬ್ಬರು ಸಹೋದರರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ನಿಟ್ಟೂರು ಗ್ರಾಮದ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ತಾಲೂಕಿನ ಗೋಡಿಹಾಳ ಗ್ರಾಮದ ಅಶೋಕ ಸಿದ್ದಪ್ಪ ಮಾಗನೂರ (50) ಹಾಗೂ ಜಗದೀಶ ಸಿದ್ದಪ್ಪ ಮಾಗನೂರ (55) ಮೃತ ದುರ್ದೈವಿಗಳು. ಇನ್ನೂ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇವರು ಗೋಡಿಹಾಳ ಗ್ರಾಮದಿಂದ ಹರಿಹರಕ್ಕೆ ನಾಮಕರಣ ಕಾರ್ಯಕ್ರಮಕ್ಕಾಗಿ ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದರು. ಈ ಸಮಯದಲ್ಲಿ ಟ್ರಾ್ಯಕ್ಟರ್ನ ಹಿಂಬದಿ ಟ್ರೇಲರ್ ಪಾಲ್ಕಾದ ಮೇಲೆ ಹಗ್ಗ ಕಟ್ಟಿ 6 ಜನ ಕುಳಿತ್ತಿದ್ದರು. ಟ್ರ್ಯಾಕ್ಟರ್ ವೇಗಕ್ಕೆ ಹಗ್ಗ ತುಂಡಾಗಿದ್ದು ಪಾಲ್ಕಾ ಬಿದ್ದಿದೆ. ಇದರಿಂದ ಕೆಳಗೆ ಬಿದ್ದ ಆರು ಜನರಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.