ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಭಾನುವಾರ ಕುಡಿದ ಮತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲೂಕಿನ ಆಲತ್ತೂರು ಗ್ರಾಮದ ದೇವರಾಜು(28) ಹಾಗೂ ಬಸವಾಪುರ ಗ್ರಾಮದ ನಾಗರಾಜು(55) ಮೃತರು. ತಾಲೂಕಿನ ಬರಗಿ ಕೆರೆಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಸೋಮವಾರ ಬೆಳಗ್ಗೆ ಸ್ಥಳೀಯರಿಂದ ಬಂದ ಮಾಹಿತಿ ಮೇರೆಗೆ ಪಟ್ಟಣದ ಪೊಲೀಸರು ಪರಿಶೀಲಿಸಿದಾಗ ಆಲತ್ತೂರು ಗ್ರಾಮದ ದೇವರಾಜು ಎಂಬುದು ತಿಳಿದುಬಂದಿತು.
ಪಟ್ಟಣದ ಚಾಮರಾಜನಗರ ರಸ್ತೆಯ ಬದಿಯಲ್ಲಿ ಭಾನುವಾರ ರಾತ್ರಿ ಮರದ ಮೇಲೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತ ನಾಗರಾಜು ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು.
ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಇಬ್ಬರಿಗೂ ಕುಡಿತದ ಚಟವಿದ್ದು, ಮತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.