ಜಿಲ್ಲೆ

ಇಬ್ಬರು ಬೈಕ್​ ಕಳ್ಳರ ವಶ

ಕೋಲಾರ ಡೆಸ್ಕ್

ಕೋಲಾರ ಪೊಲೀಸರಿಂದ ಕಾರ್ಯಾಚರಣೆ | ಕದ್ದ ಬೈಕ್​ಗೆ ಚಾಸಿ ನಂಬರ್​ ಬದಲಾಯಿಸಿ ಮಾರಾಟ

ಕೋಲಾರ: ದ್ವಿಚಕ್ರ ವಾಹನಗಳನ್ನು ಕದ್ದು ಇಂಜಿನ್​ ಚಾಸಿ ನಂಬರ್​ಗಳನ್ನು ಅಳಿಸಿಹಾಕಿ ನಕಲಿ ನಂಬರ್​ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕೋಲಾರ ನಗರ ಠಾಣೆ ಪೋಲಿಸರು ಬಂಧಿಸಿ 10 ಲಕ್ಷ ರೂಪಾಯಿ ಮೌಲ್ಯದ 21 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಂತಾಮಣಿ ಮೂಲದ ಷಾಹಿನ್​ಷಾ ನಗರದ ಮುಜೀಫ್​ ಪಾಷಾ(25) ಮತ್ತು ಸಾದಿಕ್​ ಪಾಷಾ (27) ಬಂಧಿತರು.
ಕೋಲಾರ ನಗರದಲ್ಲಿ ಆ.22ರಂದು ವಾಹನ ತಪಾಸಣೆ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಒಂದು ದ್ವಿಚಕ್ರ ವಾಹನ ಮತ್ತು ಅದರಲ್ಲಿದ್ದ ಇಬ್ಬರು ಸವಾರರನ್ನು ಹಿಡಿದು ಪೊಲೀಸರು ಪ್ರಶ್ನಿಸಿದಾಗ ಅದು ಕಳವು ಮಾಡಿರುವ ಬೈಕ್​ ಎಂದು ತಿಳಿದುಬಂದಿದೆ. ಕೂಡಲೇ ನಗರ ಠಾಣೆ ಪೊಲೀಸರು ಎಚ್ಚೆತ್ತು ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ.
ಒಂದೂವರೆ ವರ್ಷಗಳಿಂದ ಕೋಲಾರ ನಗರ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಲವು ಕಡೆ ಬೈಕ್​ಗಳನ್ನು ಕಳ್ಳತನ ಮಾಡಿ ಅದೇ ಕಂಪನಿ ವಾಹನ ದಾಖಲಾತಿಗಳನ್ನು ಕೋಲಾರ ಮುಂತಾದ ಕಡೆ ಪಾರ್ಕಿಂಗ್​ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳ ಟೂಲ್​ ಕಿಟ್​ನಲ್ಲಿ ಕದ್ದು ಅದರಲ್ಲಿದ್ದ ಆರ್​.ಸಿ.ನಂಬರ್​, ಇಂಜಿನ್​ ನಂಬರ್​, ಚಾಸಿ ನಂಬರ್​ಗಳನ್ನು ಕದ್ದ ವಾಹನಗಳಿಗೆ ಪಂಚಿಂಗ್​ ಟೂಲ್ಸ್​ನಿಂದ ಪಂಚ್​ ಮಾಡಿ ಹೊಸ ಕೀ ಸೆಟ್​ ಅಳವಡಿಸಿ ಮಾರಾಟ ಮಾಡುತ್ತಿದ್ದರು ಎಂಬುದನ್ನು ವಿಚಾರಣೆ ವೇಳೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಕದ್ದು ಮಾರಾಟ ಮಾಡಿದ 21 ಹೋಂಡಾ ಸ್ಪೆಂಡರ್​ ಬೈಕ್​ಗಳನ್ನು ಕೋಲಾರ ಹಾಗೂ ಸುತ್ತಮುತ್ತಲಿನ ಹಲವಾರು ಜನರಿಗೆ ಮಾರಾಟ ಮಾಡಿದ್ದು, ಎಲ್ಲ 21 ದ್ವಿಚಕ್ರ ವಾಹನಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಬಂಧಿತರ ವಿರುದ್ಧ ಕೋಲಾರ ನಗರದ ಗಲ್​ಪೇಟೆ, ಬೆಂಗಳೂರು ನಗರದ ಕೆ.ಜಿ.ಹಳ್ಳಿ ಹಾಗೂ ಇತರ ಪೋಲಿಸ್​ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ವಿ.ವಿ.ಭಾಸ್ಕರ್​ ಹಾಗೂ ಡಿ.ಎಸ್​.ಪಿ ಟಿ.ಮಲ್ಲೇಶ್​ ಮಾರ್ಗದರ್ಶನದಲ್ಲಿ ನಗರ ಠಾಣೆಯ ಇನ್​ಸ್ಪೆಕ್ಟರ್​ ಆರ್​.ಹರೀಶ್​, ಮಹಿಳಾ ಪಿ.ಎಸ್​.ಐ. ಹೇಮಲತಾ, ಎ.ಎಸ್​.ಐ ಸೈಯದ್​ ಖಾಸಿಂ, ಅಪರಾಧ ವಿಭಾಗದ ಸಿಬ್ಬಂದಿ ಮೋಹನ್​, ಆರ್​ .ನಾರಾಯಣಸ್ವಾಮಿ, ಶ್ರೀನಾಥ್​, ಸತೀಶ್​ ಕುಮಾರ್​, ಜೀಪ್​ ಚಾಲಕ ಮುರಳಿಮೋಹನ್​ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕೋಲಾರ ಪೊಲೀಸರು ಇಬ್ಬರು ಬೈಕ್​ ಕಳ್ಳರನ್ನು ಬಂಧಿಸಿ ವಶಪಡಿಸಿಕೊಂಡಿರುವ 21 ದ್ವಿಚಕ್ರ ವಾಹನಗಳು.

ನೋಟು ಬದಲಾವಣೆ ವಂಚಕರ ಬಂಧನ

ರಾಯಲ್ಪಾಡು: 500 ರೂಪಾಯಿ ಮುಖಬೆಲೆಯ ನೋಟುಗಳ ಬದಲಾಗಿ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದಾಗಿ ನಂಬಿಸಿ, 10 ಲಕ್ಷ ರೂಪಾಯಿ ಯಾಮಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ ಮೂವರನ್ನು ಬುಧವಾರ ರಾಯಲ್ಪಾಡು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಚಿಂತಾಮಣಿ ತಾಲೂಕಿನ ನಂದವನ ಗ್ರಾಮದ ಸುರೇಶ್​ ರೆಡ್ಡಿ (38), ಶ್ರೀನಿವಾಸಪುರ ತಾಲೂಕಿನ ತಿಮ್ಮಪಲ್ಲಿಯ ರಮೇಶ್​ ಅಲಿಯಾಸ್​ ನರೇಶ್​ (26) ಮತ್ತು ಬೈಪಲ್ಲಿಯ ಯರ್ರಪ್ಪರೆಡ್ಡಿ (55) ಬಂಧಿತರು.
ಪ್ರಕರಣ ಹಿನ್ನೆಲೆ: ಶ್ರೀನಿವಾಸಪುರ ತಾಲೂಕಿನ ಗಂಗವರಂ ಗ್ರಾಮದ ಬಿ.ವಿ.ರಮಣರೆಡ್ಡಿ ಎಂಬುವರಿಗೆ ಪಲಮನೇರು ಟೌನ್​ ಪೆಟ್ರೋಲ್​ ಬಂಕ್​ ಮ್ಯಾನೇಜರ್​ ವಾಸು ಎಂಬುವವರಿಂದ ಪರಿಚಯವಾಗಿದ್ದ ಬಾಲಾಜಿ ಎಂಬಾತ ಹಾಗೂ ಆತನ ಸ್ನೇಹಿತ ವಾಸು ಇಬ್ಬರು ಸೇರಿ ನಮ್ಮ ಬಳಿ 2 ಸಾವಿರ ರೂ. ಮುಖ ಬೆಲೆಯ ನೋಟುಗಳಿದ್ದು, ನಮಗೆ 500 ಮುಖಬೆಲೆಯ ನೋಟುಗಳನ್ನು ಕೊಟ್ಟರೆ ಶೇ.10 ಕಮಿಷನ್​ ಕೊಡಿಸುವುದಾಗಿ ಬಿ.ವಿ.ರಮಣರೆಡ್ಡಿ ಅವರನ್ನು ನಂಬಿಸಿದ್ದರು. ಬಳಿಕ ಜು.30 ರಂದು ರಮಣರೆಡ್ಡಿಯನ್ನು ಚಿಂತಾಮಣಿಗೆ ಕರೆದುಕೊಂಡು ಹೋಗಿ ಅಲ್ಲಿ ಚಲಪತಿ ಎಂಬಾತನನ್ನು, ಅಲ್ಲಿಂದ ದಿಬ್ಬೂರಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿ ಸುರೇಶ್​ರೆಡ್ಡಿ ಎಂಬಾತನನ್ನು ಪರಿಚಯ ಮಾಡಿಸಿಕೊಟ್ಟರು. ಆಗ ಸುರೇಶ್​ರೆಡ್ಡಿ ಎಂಬಾತ ನನಗೆ ರಾಜಕಾರಣಿ ಒಬ್ಬರ ಪರಿಚಯವಿದ್ದು, ಅವರ ಬಳಿ 2000 ರೂಪಾಯಿ ಮುಖಬೆಲೆಯ 5 ಕೋಟಿ ರೂಪಾಯಿ ಹಣವಿದೆ. ಅದಕ್ಕೆ ನೀವು 500 ಮುಖಬೆಲೆಯ ನೋಟುಗಳನ್ನು ಕೊಟ್ಟರೆ ನಿಮಗೆ ಶೇ.10 ಕಮಿಷನ್​ ಕೊಡಿಸುತ್ತೇನೆ ಎಂದಿದ್ದ. ನೀವು ಆ.16ರಂದು ಶ್ರೀನಿವಾಸಪುರಕ್ಕೆ ಬರುವಂತೆ ಬಿ.ವಿ.ರಮಣಾರೆಡ್ಡಿಗೆ ಸುರೇಶ್​ರೆಡ್ಡಿ ಹೇಳಿ, ಅಲ್ಲಿ ರಮೇಶ್​ ಎಂಬಾತನ್ನು ಪರಿಚಯ ಮಾಡಿಸಿ. ಆ.17ರಂದು 10 ಲಕ್ಷ ಹಣದೊಂದಿಗೆ ಶ್ರೀನಿವಾಸಪುರ ತಾಲೂಕಿನ ಲಕ್ಷಿ$್ಮಪುರ ಕ್ರಾಸ್​ಗೆ ಬರುವಂತೆ ಹೇಳಿದ್ದರು.
ಅದರಂತೆ ಬಿ.ವಿ.ರಮಣರೆಡ್ಡಿ ಆತನ ಸ್ನೇಹಿತ ಎಲ್​.ಆರ್​.ಭಾನುಪ್ರಸಾದ್​ ಜತೆಗೂಡಿ 500 ರೂ. ಮುಖಬೆಲೆಯ 10 ಲಕ್ಷ ರೂ.ನಗದಿನೊಂದಿಗೆ ಲಕ್ಷಿ$್ಮಪುರ ಕ್ರಾಸ್​ಗೆ ಬಂದಿದ್ದರು. ಆಗ ಸ್ಥಳಕ್ಕೆ ದ್ವಿಚಕ್ರವಾಹನದಲ್ಲಿ ಬಂದ ರಮೇಶ್​, ರಮಣರೆಡ್ಡಿ ಹಾಗೂ ಆತನ ಸ್ನೇಹಿತ ಎಲ್​.ಆರ್​.ಭಾನುಪ್ರಸಾದ್​ ಅವರನ್ನು ಬೈಕ್​ನಲ್ಲಿ ಕೂರಿಸಿಕೊಂಡು ಬಟ್ಟುವಾರಿಪಲ್ಲಿ ಕ್ರಾಸ್​ ಸಮೀಪದ ಅಡ್ಡಗಲ್​ ರಸ್ತೆಯ ಬದಿಯ ಜಮೀನೊಂದಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿಗೆ ಬಂದ ಇನ್ನೂ ಮೂವರು ಅಪರಿಚಿತರು ಸೇರಿ ಬಿ.ವಿ.ರಮಣಾರೆಡ್ಡಿ ಹಾಗೂ ಎಲ್​.ಆರ್​.ಭಾನುಪ್ರಸಾದ್​ಗೆ ದೊಣ್ಣೆಯಿಂದ ಹೊಡೆಯುವುದಾಗಿ ಬೆದರಿಸಿ ಅವರ ಬಳಿ ಇದ್ದ 10 ಲಕ್ಷ ರೂ.ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಟನೆಗೆ ಸಂಬಂಧಿಸಿದಂತೆ ಬಿ.ವಿ.ರಮಣಾರೆಡ್ಡಿ ಆ.18ರಂದು ರಾಯಲ್ಪಾಡು ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಿವೈಎಸ್​ಪಿ ನಂದಕುಮಾರ್​ ಮಾರ್ಗದರ್ಶನ, ಸಿಐ ಜಯಾನಂದ್​ ನೇತೃತ್ವದಲ್ಲಿ ರಾಯಲ್ಪಾಡು ಪಿಎಸ್​ಐ ಯೊಗೇಶ್​ಕುಮಾರ್​, ಗೌನಿಪಲ್ಲಿ ಪಿಎಸ್​ಐ ರಾಮು, ಎಎಸ್​ಐ ಮುನಿವೆಂಕಟಸ್ವಾಮಿ, ಸಿಬ್ಬಂದಿ ರಾಜೇಶ್​, ಸಂತೋಷ್​, ರಾಮಚಂದ್ರ, ಅನಿಲ್​, ವಾಹನ ಚಾಲಕರಾದ ರಾಮಿರೆಡ್ಡಿ, ಮಂಜುನಾಥ್​ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.