ಚನ್ನರಾಯಪಟ್ಟಣದ ಕೆರೆಬೀದಿಯ ಮನೆಯೊಂದರ ಮೇಲೆ ಕಾರ್ಯಾಚರಣೆ ಮಾಡಿರುವ ನಗರ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡರು.  
ಜಿಲ್ಲೆ

ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಇಬ್ಬರ ಬಂಧನ

Hassan

ಚನ್ನರಾಯಪಟ್ಟಣ: ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ಕೆರೆ ಬೀದಿಯ ಮನೆಯೊಂದರಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹ ಮಾಡಲಾಗಿದ್ದ ಆರೋಪದಡಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.


ಪಟ್ಟಣ ನಿವಾಸಿಗಳಾದ ನಯಾಜ್ ಹಾಗೂ ಮುಜಾಹಿದ್ ಬಂಧಿತರು. ಪ್ರಾಣಹಾನಿ ಉಂಟು ಮಾಡುವ ಮತ್ತು ಸಾರ್ವಜನಿಕರು ವಾಸವಿರುವ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಪಟಾಕಿ ಹಾಗೂ ಇತರ ಸ್ಫೋಟಕ ವಸ್ತುಗಳನ್ನು ಮಾರಾಟ ಮಾಡಲು ಸಂಗ್ರಹಿಸಿಟ್ಟಿರುವ ಬಗ್ಗೆ ನಗರ ಠಾಣೆಯ ಪಿಎಸ್‌ಐ ಎಸ್.ಎ.ಸುಪ್ರೀತ್ ಹಾಗೂ ಸಿಬ್ಬಂದಿ ಮಾಹಿತಿ ಪಡೆದಿದ್ದಾರೆ. ಬಳಿಕ ನಯಾಜ್ ಹಾಗೂ ಮುಜಾಹಿದ್ ಅವರ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಯಿತು.


ವಶಪಡಿಸಿಕೊಳ್ಳಲಾದ ಸ್ಫೋಟಕಗಳ ವಿವರ: ಸಲ್ಫರ್ ಫೌಡರ್ ಅರ್ಧ ಕೆಜಿ, ಸುತ್ತಲಿದಾರ 2 ಕೆಜಿ, ಹಸಿ ನೂಲಿನ ದಾರ 1 ಕೆಜಿ, ನ್ಯೂಸ್ ಪೇಪರ್ ಕೊಳವೆ 100, ಪಟಾಕಿ ಬತ್ತಿ 50, ಬಿಳಿ ನ್ಯೂಸ್ ಪೇಪರ್‌ನಿಂದ ಸುತ್ತಿರುವ ಕೊಳವೆ ಆಕಾರದ 8-10 ಅಡಿ ಉದ್ದದ 8 ಬಂಡಲ್ ಸರ ಪಟಾಕಿ, ಸುತ್ತಲಿದಾರದಿಂದ ಸುತ್ತಿ ಮಾಡಿರುವ 108 ಆಟಂಬಾಂಬ್ ಪಟಾಕಿಗಳು, 4 ಬಾಕ್ಸ್ ಲಾಲಿಪಪ್ಸ್, 2000 ವಾಲಾ ಪಟಾಕಿ, 3 ಬಾಕ್ಸ್ ಲಾಲಿಪಪ್ಸ್, 1000 ವಾಲಾ ಗಾರ್ಲೆಂಡ್ಸ್ ಪಟಾಕಿ, 1 ಬಾಕ್ಸ್ ರಿಯಲ್ ಮಾಸ್ಟರ್‌ಪಟಾಕಿ, 2 ಬಾಕ್ಸ್ ಶೋಲೇ ಬಾಂಬ್ ಪಟಾಕಿ, 57 ಸಣ್ಣ ಬಾಕ್ಸ್‌ನ ಹೈಡ್ರೋ ಬಾಂಬ್ ಪಟಾಕಿ, 3 ಪ್ಯಾಕೆಟ್ ಸರ ಪಟಾಕಿ ಮತ್ತು 25 ಅಡಿ ಸರ ಪಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ.


ವಿಧಿ ವಿಜ್ಞಾನ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿದ್ದು, ಇವು ಸ್ಫೋಟಕ ವಸ್ತುಗಳೇ ಎಂಬುದನ್ನು ಖಚಿತಪಡಿಸಿಕೊಂಡು ಅವುಗಳನ್ನು ನಾಶಪಡಿಸಲು ಅನುಮತಿಗಾಗಿ ನ್ಯಾಯಾಲಯದ ಮೊರೆ ಹೋಗಲಾಗಿದೆ. ಈ ನಡುವೆ ಸ್ಫೋಟಕ ನಿರ್ಬಂಧ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಯಾವ ಕಾರಣಕ್ಕೆ ಈ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹ ಮಾಡಲಾಗಿತ್ತು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.